Monsoon : ಕಮ್ಮಾರ ವೃತ್ತಿಗೆ, ಕೆಲಸ ಕೊಡುವ ಮುಂಗಾರು

ದಾವಣಗೆರೆ (ನ್ಯಾಮತಿ): ತಂತ್ರಜ್ಞಾನದ ಹೊಡೆತಕ್ಕೆ ಸಿಲುಕಿ ಕುಲ ಕಸಬುಗಳು ಮೂಲೆಗುಂಪಾಗಿವೆ. ಹೀಗೆ ನಿರ್ಲಕ್ಷ್ಯಕ್ಕೆ ಒಳಗಾದ ವೃತ್ತಿಗಳಲ್ಲಿ ಕುಲುಮೆ ಕೆಲಸವೂ ಒಂದು ಈ ಪಾರಂಪರಿಕ ವೃತ್ತಿ ಕಣ್ಮರೆ ಆಗುತ್ತೀರುವ ಸಮಯದಲ್ಲಿ ಅರೆ ಮಲೆನಾಡಿನ ಭಾಗವಾದ ನ್ಯಾಮತಿ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ದೇಸಿ ಪದ್ದತಿಯಲ್ಲಿ ಕೃಷಿ ಪರಿಕರಗಳು ತಯಾರಾಗಿ ರೈತರಿಗೆ ನೆರವಾಗುತ್ತಿವೆ.
ಮುಂಗಾರು ಬಂತೆಂದರೆ ಕೃಷಿ ಚಟುವಟಿಕೆ ಚುರುಕಾಗುತ್ತವೆ. (ಕಮ್ಮಾರರು) ವಿಶ್ವಕರ್ಮ ಸಮುದಾಯ , ಮುಸ್ಮಿಂ ಸಮುದಾಯದವರ ಪೂರ್ವಿಕರ ಬಳುವಳಿಯಾದ ಕುಲುಮೆ ಕಾಯಕದಲ್ಲಿ ತೊಡಗಿಸಿ ಕೃಷಿ ಉಪಕರಣಗಳನ್ನು ದೇಸಿ ಪದ್ಧತಿಯಲ್ಲಿ ತಯಾರಿಸಿ ಕಮ್ಮಾರರು ಆ ಮೂಲಕ ರೈತರಿಗೂ ನೆರವಾಗುತ್ತಿದ್ದಾರೆ. ಜಮೀನು ಕೆಲಸ ಆರಂಭಿಸುವ ಮುನ್ನ ರೈತರು ಕಮ್ಮಾರರ ಬಳಿ ತೆರಳಿ ಕುಂಟೆ, ಎಡೆ ಹೊಡೆವ ತಾಳು, ನೇಗಿಲು ತಾಳು ಹೀಗೆ ಹಲವು ಕೃಷಿ ಪರಿಕರಗಳನ್ನು ಕಮ್ಮಾರರ ಬಳಿ ಹಣಿಸಲಾಗುತ್ತಿದೆ.
ಬೆಳಗ್ಗೆಯಿಂದ ರಾತ್ರಿವರೆಗೂ ಬಿಡುವಿಲ್ಲದೇ ಕೆಲಸದಲ್ಲಿ ತೊಡಗಿಕೊಂಡ ಕಮ್ಮಾರರಿಗೆ ಒಂದಷ್ಟು ದುಡಿದುಕೊಳ್ಳಲು ಮುಂಗಾರು ಸಮಯವನ್ನು’ ಸೀಸನ್ ‘ ಎಂತಲೇ ಹೇಳಬಹುದು. ಕುಲುಮೆ ಮಾಡುವ ಕಮ್ಮಾರರು ವ್ಯವಸಾಯಕ್ಕೆ ಬೇಕಾದ ಕುಡುಗೋಲು, ಮಚ್ಚು, ಕೊಡಲಿ, ಅಗೆಯೊ ಗುದ್ದಲಿ, ಪಿಕಾಸಿ, ಗಡಾರಿ, ಸಲಿಕೆ, ಬಾಚಿ, ಉಳಿಗಳು, ನೇಗಿಲು ಚಿಪ್ಪುಗಳು, ಕಳೆ ತೆಗೆಯೊ ಬರವಾರೆಗಳನ್ನು ಮಾಡಿ ಕೊಡುತ್ತಾರೆ . ಇಲ್ಲಿ ಇಬ್ಬರು ಮೂವರು ಕೆಲಸ ಮಾಡುತ್ತಾರೆ.
ಒಬ್ಬರು ಕಬ್ಬಿಣವನ್ನು ಬಡಿದರೆ, ಮತ್ತೊಬ್ಬರು ಬೆಂಕಿಗೆ ಗಾಳಿ ಹ್ಯಾಂಡಲ್ ತಿರುಗಿಸುತ್ತಾರೆ. ಇನ್ನೊಬ್ಬರು ಕಾದ ಕಬ್ಬಿಣ ಹಿಡಿದು ಕೆಲಸ ಮಾಡುತ್ತಾರೆ. ಒಂದು ಕುಂಟೆ ತಾಳು ಹಣಿಯಲು 150 ರೂ., ಎಡೆ ಕುಂಟೆ ತಾಳಿಗೆ 70 ರೂ., ಮಚ್ಚು 50 ರೂ., ಕುರ್ಜಿಗೆ 50 ರೂ. ಇತರೆ ಪರಿಕರಗಳಿಗೆ ತಕ್ಕಂತೆ ಹಣವಿರುತ್ತದೆ. ಕೆಲಸಕ್ಕೆ ಬಳಸಲು (ಬೆಂಕಿಗೆ) ಒಂದು ಚೀಲ ಭತ್ತದ ಜೊಳ್ಳು , ಒಂದು ಮೊರ ಇದ್ದಿಲು ಎನ್ನುತ್ತಾರೆ ನ್ಯಾಮತಿ ಪಟ್ಟಣದ ಕುಲುಮೆ ಮಾಲೀಕ ಶೇಕ್ ಮೇಹಬೂಬ. ಇತ್ತೀಚಿನ ದಿನಗಳಲ್ಲಿ ಈ ವೃತ್ತಿ ಮಾಡುವರು ಬೆರಳೆಣಿಕೆಯಷ್ಟು.
ಹಿಂದೆ ರೈತರಿಗೆ ಕೃಷಿ ಸಾಮಾಗ್ರಿಗಳನ್ನು ಹಣಿಸಲು ಇವರ ಅವಶ್ಯಕತೆ ಇರುತ್ತಿತ್ತು. ಆದರೆ ಟ್ರ್ಯಾಕ್ಟರ್, ಪವರ್ ಟಿಲ್ಲರ್ ಬಂದ ಮೇಲೆ ಇವರಿಗೆ ಕೊಂಚ ಕೆಲಸ ಕಡಿಮೆಯಾಗುತ್ತಿದ್ದರೂ ಕೆಲ ಸಂದರ್ಭದಲ್ಲಿ ಮಾತ್ರ ಕುಲುಮೆಗಾರರು ಬೇಕಾಗುತ್ತಾರೆ. ಇದೀಗ ಕೂಲಿ ಕಾರ್ಮಿಕರ ಕೊರತೆಯಿಂದ ಟ್ರ್ಯಾಕ್ಟರ್, ಟಿಲ್ಲರ್, ಜೆಸಿಬಿಗಳ ಮೂಲಕ ಜಮೀನು ಹದ ಮಾಡಿ ಬೆಳೆ ತೆಗೆಯುತ್ತಿದ್ದಾರೆ. ಹಾಗಾಗಿ ಹಳೇ ಕೃಷಿ ಪರಿಕರಗಳನ್ನು ಬಳಸಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಕುಲುಮೆ ಕೆಲಸ ಕಡಿಮೆಯಾಗಿದೆ.
ಇದ್ದಿಲು ಅವಶ್ಯ: ಕುಲುಮೆದಾರರಿಗೆ ಕಬ್ಬಿಣ ಕಾಯಿಸಲು ಇದ್ದಿಲು ಅವಶ್ಯ. ಕೆಲವೊಮ್ಮೆ ಬೇಡಿಕೆಗೆ ತಕ್ಕಂತೆ ಮೂಟೆಗೆ ಸಾವಿರ ಕೊಟ್ಟರೂ ಇದ್ದಿಲು ಸಿಗುತ್ತಿಲ್ಲ. ಹಳ್ಳಿ, ನಗರಗಳಲ್ಲಿ ಅಡುಗೆ ತಯಾರಿಸಲು ಸಿಲಿಂಡರ್ ಗ್ಯಾಸ್ ಬಳಕೆ ಮಾಡುತ್ತಿರುವುದರಿಂದ ಇದ್ದಿಲು ಸಿಗುವುದು ಅಪರೂಪವಾಗಿದೆ. ಕಸುಬು ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಕಮ್ಮಾರ ವೃತ್ತಿದಾರ ಜೀಯವುಲ್ಲ ಖಾನ್ ಹೇಳಿದರು.
ಹೊಲದ ಕಳೆ ತೆಗೆಯಲು ಕಮ್ಮಾರರು ಹಣಿದ ಕುಡ ಅಥವಾ ತಾಳುಗಳು ಬೇಕಾಗುತ್ತವೆ. ಬೆಳೆಗಳ ಸಾಲಿನ ನಡುವೆ ಬೇಸಾಯ ಹೊಡೆದರೆ ಬೆಳೆದ ಕಳೆ ನಾಶವಾಗಿ, ಸಾಲಿನಲ್ಲಿ ಮಣ್ಣು ಸಸಿಗಳ ಬುಡಕ್ಕೆ ಬರುತ್ತದೆ. ಆಗ ಸಸಿ ಗಟ್ಟಿಯಾಗಿ ಸದೃಢವಾಗಿ ಬೆಳೆಯುತ್ತದೆ. ಒಟ್ಟಾರೆ ರೈತರು ಮತ್ತು ಕಮ್ಮಾರರಿಗೆ ಕೃಷಿ ಪರಿಕರಗಳಿಂದ ಅವಿನಾಭಾವ ಸಂಬಂಧವಿದೆ ಎನ್ನುತ್ತಾರೆ ಮಲ್ಲಿಗೇನಹಳ್ಳಿ ಗ್ರಾಮದ ಜಿ.ಎಚ್.ಪರಮೇಶ್ವರಪ್ಪ.
ಮೊದಲು ರೈತರು ವ್ಯವಸಾಯಕ್ಕೆ ಬೇಕಾದ ಎಲ್ಲ ಸಾಮಗ್ರಿಗಳನ್ನು ಮಾಡಿಸಿಕೊಳ್ಳುತ್ತಿದ್ದರು. ಅದಕ್ಕೆ ಪ್ರತಿಯಾಗಿ ಧಾನ್ಯ ಕೊಡುತ್ತಿದ್ದರು. ರೈತರ ಮನೆಗಳಿಗೆ ಹೋದರೆ ಪ್ರೀತಿಯಿಂದ ಬರಮಾಡಿಕೊಂಡು ಊಟ ಬಡಿಸಿ ಅಕ್ಕರೆ ತೋರುತ್ತಿದ್ದರು. ಉಳುಮೆ ಯಂತ್ರಗಳು ಬಂದ ಮೇಲೆ ಕೃಷಿ ಪದ್ಧತಿ ಬದಲಾಗಿದೆ , ನಸುಕಿನಲ್ಲೆ ಕೃಷಿಕರು ನಮ್ಮ ಕುಲುಮೆ ಬಳಿ ಸಲಕರಣೆಗಳನ್ನು ಹದ ಮಾಡಿಸಿಕೊಳ್ಳಲು ಕಾಯುತ್ತಿದ್ದರು. ಆದರೆ ಈಗ ಕಾಲ ಬದಲಾಗಿದ್ದು ಒಂದಿಷ್ಟು ಕೆಲಸ ಕಡಿಮೆ ಆಗಿದೆ ಎಂದು ಕಮ್ಮಾರ ವೃತ್ತಿದಾರ ಜಗದೀಶ್ ಆಚಾರ್ ಬೇಸರ ವ್ಯಕ್ತಪಡಿಸುತ್ತಾರೆ.