ದಾವಣಗೆರೆ: ಪ್ರಸ್ತುತ ದಿನಮಾನಗಳಲ್ಲಿ ಬಹುತೇಕ ಸಂಘಟನೆಯೂ ರಾಜಕೀಯ ಪ್ರೇರಿತವಾಗಿ ಕೆಲಸ ಮಾಡುತ್ತಿವೆ. ಜನರ ನೋವಿಗೆ ಧನಿಯಾಗುವ ಒಂದೇ ಒಂದು ಸಂಘಟನೆ ಕೂಡ ಸಿಗುವುದಿಲ್ಲ. ಈ ರೀತಿ ರಾಜಕೀಯ ಪಕ್ಷದ ತೆಕ್ಕೆಗೆ ಸೇರುವ ಸಂಘಟನೆಗಳು ಬಹುಬೇಗ ಅಂತ್ಯ ಕಾಣುತ್ತವೆ ಎಂದು ಹಿರಿಯ ವಕೀಲ ಎಲ್.ಎಚ್.ಅರುಣ್‌ಕುಮಾರ್ ಎಚ್ಚರಿಕೆ ನೀಡಿದರು.
ಶುಕ್ರವಾರ ನಗರದ ರೋಟರಿ ಬಾಲಭವನದಲ್ಲಿ ಸ್ಲಂ ಜನಾಂದೋಲನ ಕರ್ನಾಟಕ ಹಾಗೂ ಸಾವಿತ್ರಿಬಾಯಿ ಫುಲೆ ಮಹಿಳಾ ಸಂಘಟನೆ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಹಾಗೂ ಸ್ಲಂ ಜನರ ಪ್ರಣಾಳಿಕೆ ಬಿಡುಗಡೆ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿ, ಜನಪರವಾಗಿ ಕೆಲಸ ಮಾಡುವ ಜನರಿಗೆ ದನಿಯಾಗುವ ಸಂಘಟನೆಗಳು ಇಂದು ಇಲ್ಲದಂತಾಗಿದೆ. ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆಯು ಸ್ಲಂ ನಿವಾಸಿಗಳ ಪರವಾಗಿ ಕೆಲಸ ಮಾಡುತ್ತಿದ್ದು, ರಾಜಕೀಯ ಮುಕ್ತವಾಗಿದೆ. ಯಾವುದೇ ಸಮಸ್ಯೆಗಳ ವಿರುದ್ದ ಧೈರ್ಯವಾಗಿ ಹೋರಾಟ ಮಾಡಬಹುದು. ಯಾವುದೇ ಒಂದು ರಾಜಕೀಯ ಪಕ್ಷಕ್ಕೆ ಸೇರಿದರೆ ಜನರ ಪರವಾಗಿ ಕೆಲಸ ಮಾಡಲು ಆಗಲ್ಲ ಎಂದರು.
ಸ್ವಾತಂತ್ಯ್ರ ಬಂದು 75 ವರ್ಷ ಕಳೆದರೂ ಸಹ ಇಂದಿಗೂ ನಾವು ಜಾತಿ, ಧರ್ಮದ ಆಧಾರದ ಮೇಲೆ ನೋಡುವ ವ್ಯವಸ್ಥೆ ಇದೆ. ನಾವುಗಳು ಇನ್ನೊಬ್ಬರ ಜೊತೆ ಬೆರೆಯಲು ಪ್ರಯಾಸ ಪಡುವಂತಾಗಿದೆ. ಇಂದಿಗೂ ಸಹ ಅಸ್ಪೃಷ್ಯತೆ, ಅಸಮಾನತೆ ಇದೆ. ಈ ನಡುವೆ ಸಂವಿಧಾನದ ಮೂಲ ಆಧಾರ ಸ್ತಂಭಗಳನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ. ಬಲಿಷ್ಠ ಸಂವಿಧಾನ ಇರುವುದರಿಂದಲೇ ದೇಶದಲ್ಲಿ ಪ್ರಜಾಪ್ರಭುತ್ವ ನಿರಂತರವಾಗಿ ಇದೆ ಎಂದರು.
ಹಿರಿಯ ವಕೀಲರಾದ ಬಿ.ಎಂ.ಹನುಮಂತಪ್ಪ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿ, ಕೊಳಚೆಯಲ್ಲಿ ಹುಟ್ಟಿ, ಅಲ್ಲೇ ಬೆಳೆದು ಅಲ್ಲಿಯೇ ಸಾಯುವ ನಾವುಗಳು ಚುನಾವಣೆ ವೇಳೆ ತಲೆ ತಗ್ಗಿಸಿ ಮತದಾನ ಮಾಡುವ ಜತೆಗೆ ನಮಗೆ ದೊರೆಯಬೇಕಾದ ಹಕ್ಕುಗಳನ್ನು ತೆಲೆ ಎತ್ತಿ ಕೇಳುವ ನಾಯಕತ್ವದ ಗುಣ ಬೆಳೆಸಿಕೊಳ್ಳಬೇಕೆಂದರು.
ಮತ ಹಾಕುವ ವೇಳೆ ಮಾತ್ರ ರಾಜಕೀಯ ಪಕ್ಷಗಳಿಗೆ ಸ್ಲಂ ಜನ, ದಲಿತ, ಬಡವರು ನೆನಪಾಗುತ್ತಾರೆ. ಆದರೆ, ಸೌಲಭ್ಯ ನೀಡುವಾಗ ಮಾತ್ರ ಅವರು ನೆನಪಾಗುವುದಿಲ್ಲ. ಇದಲ್ಲದೇ ಆಡಳಿತಾರೂಢ ಪಕ್ಷಗಳೂ ಶ್ರೀಮಂತರ ಓಲೈಕೆಗೆ ನಿಂತಿದ್ದು, ಈಗಿರುವ ಶ್ರೀಮಂತರನ್ನು ಮತ್ತಷ್ಟು ಶ್ರೀಮಂತರನ್ನಾಗಿ ಮಾಡಲು ಪಣ ತೊಟ್ಟಂತಿದೆ ಎಂದು ಕಿಡಿ ಕಾರಿದರು.
ಬಡವರ ಕೂಗು, ಗೋಳುಗಳು ಎಂದಿಗೂ ಸರಕಾರಕ್ಕೆ ಕೇಳುವುದಿಲ್ಲ. ಬದಲಾಗಿ ಬೆರಳೆಣಿಕೆಯಷ್ಟು ಶ್ರೀಮಂತರ ಮಾತು ಕೇಳುತ್ತದೆ. ಹೀಗಾಗಿ ನಮ್ಮ ಧ್ವನಿ ಸರಕಾರಕ್ಕೆ ಕೇಳಬೇಕೆಂದರೆ ನಮ್ಮಲ್ಲೇ ನೂರಾರು, ಸಾವಿರಾರು ನಾಯಕರು ಹುಟ್ಟಬೇಕು. ಹೋರಾಟದ ಮೂಲಕ ನಮ್ಮ ಹಕ್ಕುಗಳನ್ನು ಪಡೆಯುವ ಛಲ ಬರಬೇಕು ಎಂದರು.
ಕಾರ್ಯಕ್ರಮದಲ್ಲಿ ಸ್ಲಂ ಜನಾಂದೋಲನ ಕರ್ನಾಟಕ ದಾವಣಗೆರೆ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಿ.ಹೆಚ್.ರೇಣುಕಾ ಯಲ್ಲಮ್ಮ, ಗೌರವಾಧ್ಯಕ್ಷ ಎಂ.ಶಬ್ಬೀರ್ ಸಾಬ್, ಮಂಜುಳಾ, ಬಾಲಪ್ಪ ಇತರರು ಇದ್ದರು.
