ಕೌಟುಂಬಿಕ ಸಮರ್ಥ ನಿರ್ವಹಣೆಯ ತಾಯಿ ಬೇರು ಮಹಿಳೆ: ಶ್ರೀಮತಿ ಗಿರಿಜಾ ಮಾಲಿ ಪಾಟೀಲ್
ದಾವಣಗೆರೆ : ಮಹಿಳೆ ಕೇವಲ ಅಡಿಗೆ ಮನೆಗೆ ಸೀಮಿತವಾಗದೇ ಸಾಮಾಜಿಕ ಸಾಂಸ್ಕೃತಿಕ ಕಾಳಜಿಯ ಸಮಾಜಮುಖಿ ಕಾಯಕಗಳಲ್ಲಿ ತೊಡಗಿಸಿಕೊಂಡರೆ ಜೀವನಕ್ಕೆ ಸಾರ್ಥಕತೆ ಬರುತ್ತದೆ. ಎಲೆಮರೆಯ ಹಣ್ಣು, ಕಾಯಿಗಳಿಗೆ ಸೂಕ್ತ, ಮುಕ್ತವಾದ ವೇದಿಕೆ ಕಲ್ಪಿಸುವ ದಾವಣಗೆರೆಯ ಕಲಾಕುಂಚ ಇಡೀ ನಾಡಿಗೆ ಮಾದರಿಯಾಗಿದೆ, ಕೂಡು ಕುಟುಂಬಗಳಲ್ಲಿ ಸೌಜನ್ಯದ ಹೊಂದಾಣಿಕೆಯ ಪರಮಿತಿಯೇ ಸಂಸಾರ ಸಮತೋಲನದಲ್ಲಿ ಸಾಗುವುದು ಈ ಹಂತದಲ್ಲಿ ಮಹಿಳೆಯರು, ತಮ್ಮ ಇಚ್ಛಾಶಕ್ತಿಯೊಂದಿಗೆ ಎಲ್ಲಾ ಕಷ್ಟ ಕಾರ್ಪಣ್ಯಗಳನ್ನು ಎದುರಿಸಿ ತಾಳ್ಮೆಯಿಂದ ಸಾಗಿದಾಗ ಕುಟುಂಬ ನಿರ್ವಹಣೆಯ ಹಾದಿ ಸುಗಮವಾಗುತ್ತದೆ. ಮಹಿಳೆಯರ ಎಲ್ಲಾ ಹಂತದ ಸಬಲೀಕರಣಕ್ಕೆ ಪುರುಷರ ಬೆಂಬಲ ಬೇಕೆಬೇಕು. ಇತ್ತೀಚಿನ ದಿನಮಾನಗಳಲ್ಲಿ ಆಧುನಿಕ ತಂತ್ರಜ್ಞಾನದ ಭರಾಟೆಯಲ್ಲಿ ನಮ್ಮ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯಗಳು ಮರೆಯಾಗುತ್ತಿರುವುದು ವಿಷಾದದ ಸಂಗತಿ. ಈ ನಮ್ಮ ಪರಂಪರೆಗಳನ್ನು ಪುನರೋತ್ಥಾನಗೊಳಿಸುವ ನಿಟ್ಟಿನಲ್ಲಿ ಕಲಾಕುಂಚ ಮಹಿಳಾ ವಿಭಾಗ ಮುಂಚೂಣಿಯಲ್ಲಿರುವುದು ಹೆಮ್ಮೆ ತರುವ ವಿಚಾರ ಎಂದು ವಿಜಯಪುರದ ಖ್ಯಾತ ಯುವ ಸಾಹಿತಿ, ಕವಯತ್ರಿ, ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ಸಂಸ್ಥಾಪಕರಾದ ಶ್ರೀಮತಿ ಗಿರಿಜಾ ಮಾಲಿ ಪಾಟೀಲ್ ತಮ್ಮ ಮನದಾಳದ ಮಾತನ್ನು ವ್ಯಕ್ತಪಡಿಸಿದರು.
ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಅಂಗ ಸಂಸ್ಥೆ ಕಲಾಕುಂಚ ಮಹಿಳಾ ವಿಭಾಗದ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಗರದ ವಿಜಯಲಕ್ಷ್ಮಿರಸ್ತೆಯ ಚನ್ನಗಿರಿ ವಿರೂಪಾಕ್ಷಪ್ಪ ಧರ್ಮಶಾಲಾ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾದ “ದಾವಣಗೆರೆ ಗೃಹಿಣಿ ಸ್ಪರ್ಧೆ-2022” ಸ್ಪರ್ಧಾ ವಿಜೇತರಿಗೆ ಮಸ್ತಕದ ಮೇಲೆ ಕಿರೀಟವಿಟ್ಟು, ಸ್ಮರಣಿಕೆ, ಪ್ರಮಾಣಪತ್ರ ವಿತರಿಸಿ ಅವರು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದ ನಗರದ ಶ್ರೀ ಸಿದ್ಧಗಂಗಾ ವಿದ್ಯಾ ಸಂಸ್ಥೆಯ ಮುಖ್ಯಸ್ಥರಾದ ಜಸ್ಟಿನ್ ಡಿಸೋಜಾ ಮಾತನಾಡಿ, ಮುಂದಿನ ದಿನಗಳಲ್ಲಿ ಗೃಹಿಣಿ ಸ್ಪರ್ಧೆಯನ್ನು ಹಿರಿಯ ಮಹಿಳೆಯರಿಗೆ ಸ್ಪರ್ಧೆ ಏರ್ಪಡಿಸಿದರೆ ಸೂಕ್ತ ಎಂದು ತಮ್ಮ ಅನಿಸಿಕೆ ಹಂಚಿಕೊಂಡರು. ಯುವ ಕವಯತ್ರಿ, ಸಾಹಿತಿ ಶ್ರೀಮತಿ ಮಂಜುಳಾ ಪ್ರಸಾದ್ ಬಂಗೇರ ಮಾತನಾಡಿ, ವಿಶ್ವ ಮಹಿಳಾ ದಿನಾಚರಣೆ ಕೇವಲ ಒಂದು ದಿನಕ್ಕೆ ಒಂದು ತಿಂಗಳಿಗೆ ಸೀಮಿತವಾಗಿರದೇ ವರ್ಷದ ಮುನ್ನೂರು ಅರವತ್ತೊಂದು ದಿನಗಳಲ್ಲಿ ಮಹಿಳೆಯ ಸರ್ವತೋಮುಖ ಪ್ರತಿಭೆ ಅನಾವರಣಕ್ಕೆ, ಕಷ್ಟ-ಕಾರ್ಪಣ್ಯಕ್ಕೆ ಸಂಘಟನೆಗಳು ಸ್ಪಂದಿಸಬೇಕಾಗಿದೆ ಎಂದು ಹೇಳಿ ಮಹಿಳೆಯರ ಸರ್ವ ತಂತ್ರ ಸ್ವತಂತ್ರದ ಕುರಿತಂತೆ ಸ್ವರಚಿತ ಕವನ ವಾಚನ ಮಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷರಾದ ಹೇಮಾ ಶಾಂತಪ್ಪ ಪೂಜಾರಿ ಮಾತನಾಡಿ, “ಪ್ರತಿ ಮನೆ, ಮನಗಳಲ್ಲಿ ಮಹಿಳೆಯರ ಬಗ್ಗೆ ಗೌರವ, ಉತ್ತಮ ಸ್ಥಾನ, ಮಾನ ಕೊಡುವ ಔದಾರ್ಯತೆ ಎಲ್ಲರಲ್ಲಿ ಇರಬೇಕು. ಯಾವುದೇ ಪ್ರಾಯೋಜಕತ್ವ ಇಲ್ಲದೇ ಸ್ವತಂತ್ರವಾಗಿ ನಡೆಸುವ ಈ ಸಮಾರಂಭಕ್ಕೆ ಸಹಕರಿಸಿದ ಕಲಾಕುಂಚದ ಎಲ್ಲಾ ಸದಸ್ಯರಿಗೆ, ಪದಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಬೆಂಗಳೂರಿನ ನಿಹಾರಿಕ ಬಾಲಪ್ರತಿಭೆಗೆ ಅವಳ ಪುಟ್ಟ ವಯಸ್ಸಿನ ಸಂಗೀತ ಸಾಧನೆಗೆ ಸನ್ಮಾನಿಸಿ, ಗೌರವಿಸಲಾಯಿತು. ಗೃಹಿಣಿ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ಅವರದೇ ಭಾವಚಿತ್ರವಿರುವ ಸ್ಮರಣಿಕೆ, ಪ್ರಮಾಣಪತ್ರ ವಿತರಿಸಲಾಯಿತು.
ಶ್ರೀಮತಿ ವಾಗೀಶ್ವರಿ ಭರತ್ ಮತ್ತು ಸಾವಿತ್ರಿ ಸೂರಜ್‌ರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಮಾರಂಭಕ್ಕೆ ಕವಿಯತ್ತಿ ಸಾಹಿತಿ, ಶ್ರೀಮತಿ ಮಂಜುಳಾ ಸುನೀಲ್ ಸ್ವಾಗತಿಸಿದರು. ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕರಾದ ಶ್ರೀಮತಿ ಜ್ಯೋತಿ ಗಣೇಶ್‌ಶೆಣೈ, ಸಂಸ್ಥೆಯ ಗೌರವ ಅಧ್ಯಕ್ಷರಾದ ಶ್ರೀಮತಿ ವಸಂತಿ ಮಂಜುನಾಥ್, ಚನ್ನಗಿರಿ ವಂಶಸ್ಥರ 5ನೇ ತಲೆಮಾರಿನ ಶ್ರೀಮತಿ ರಶ್ಮಿ ಭರತ್ ಚನ್ನಗಿರಿ, ಗುಪ್ತದಾನಿ ಸಮಾಜ ಸೇವಕಿ ಶ್ರೀಮತಿ ಸಾವಿತ್ರಾ ರೇವಣಸಿದ್ದಪ್ಪ ಆನೆಕೊಂಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಾಸ್ತಾವನೆಯಾಗಿ ಮಾತನಾಡಿದ ಕನ್ನಡ ಉಪನ್ಯಾಸಕಿ ಶ್ರೀಮತಿ ಶೈಲಾ ವಿನೋದ ದೇವರಾಜ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಲಾಕುಂಚ ವಿವಿಧ ಶಾಖೆಗಳ ಅಧ್ಯಕ್ಷರುಗಳಾದ ಶ್ರೀಮತಿ ಲಲಿತಾ ಕಲ್ಲೇಶ್, ಶ್ರೀಮತಿ ಶಾರದಮ್ಮ ಶಿವನಪ್ಪ, ಶ್ರೀಮತಿ ಸುಜಾತಾ ಬಸವರಾಜ್, ಕಲಾಕುಂಚ ಮಹಿಳಾ ವಿಭಾಗದ ಸಂಘಟನಾ ಕಾರ್ಯದರ್ಶಿ ಶ್ರೀಮತಿ ಕುಸುಮಾ ಲೋಕೇಶ್, ಕೋಶಾಧ್ಯಕ್ಷರಾದ ಶ್ರೀಮತಿ ಗಿರಿಜಮ್ಮ ನಾಗರಾಜ್ ಮುಂತಾದವರು ಉಪಸ್ಥಿತರಿದ್ದರು. ಕೊನೆಯಲ್ಲಿ ಕವಯತ್ರಿ, ಸಾಹಿತಿ ಶ್ರೀಮತಿ ಸಾವಿತ್ರಿ ಜಗದೀಶ್ ವಂದಿಸಿದರು.