ಶ್ರೀ ದುಗ್ಗಮ್ಮ ಜಾತ್ರೆ : ಕುರಿ ತಲೆ ಕಾಲು ಸ್ವಚ್ಚ ಕಾರ್ಯಕ್ಕೆ ದರ ಎಷ್ಟು ಗೊತ್ತಾ?, ಕುರಿ ಚರ್ಮಕ್ಕೆ ಬೆಲೆ ಏಕೆ ಕಡಿಮೆ?
ದಾವಣಗೆರೆ : ಐತಿಹಾಸಿಕ ದಾವಣಗೆರೆ ದುಗ್ಗಮ್ಮ ಜಾತ್ರೆ ಪ್ರಯುಕ್ತ ನಗರದ ಗಲ್ಲಿ ಗಲ್ಲಿಗಳು ಜನಜಂಗುಳಿಯಿಂದ ಕೂಡಿದೆ. ಇಂದು ನಗರದಲ್ಲಿ ಬಾಡೂಟಕ್ಕೆ ಬೇಕಾದ ಸಕಲ ಸಿದ್ದತೆಗಳು ನಡೆದವು. ನಗರದ ಡಾಂಗೇಪಾರ್ಕ್ ರಸ್ತೆಯಲ್ಲಿ ಮಟನ್ ಪ್ರಿಯರು ಕುರಿಯ ತಲೆ ಕಾಲುಗಳನ್ನು ಸುಡುತ್ತಿದ್ದ ಸ್ಥಳಕ್ಕೆ ಬಂದು ಸ್ವಚ್ಚಗೊಳಿಸಿಕೊಂಡು ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕುರಿಯ ತಲೆ, ಕಾಲು ಸುಟ್ಟು ಅದನ್ನು ಸ್ವಚ್ಚ ಮಾಡಿಕೊಡುವುದಕ್ಕೆ ಒಂದಕ್ಕೆ 150 ರಿಂದ 200 ರೂಗಳವರೆಗೂ ಬೆಲೆ ನಿಗಧಿಪಡಿಸಲಾಗಿತ್ತು. ಕುರಿ ತಲೆಯ ಗಾತ್ರದ ಆಧಾರದ ಮೇಲೆ ಅದರ ದರ ನಿಗಧಿಪಡಿಸಲಾಗಿತ್ತು.
ರಸ್ತೆ ತುಂಬಾ ಕುರಿಯ ಕೈಕಾಲು ಸುಟ್ಟು ಸ್ವಚ್ಚಗೊಳಿಸುತ್ತಿದ್ದದ್ದು ನಡೆಯುತ್ತಿದ್ದರಿಂದ ಜನರು ವಿಪರೀತ ಸಂಖ್ಯೆಯಲ್ಲಿ ಬಂದು ಕುರಿಯ ಕೈಕಾಲು ಸ್ವಚ್ಚಗೊಳಿಸಿಕೊಂಡು ಹೋಗುತ್ತಿದ್ದರು. ಇದರಿಂದ ಈ ಭಾಗದಲ್ಲಿ ವಿಪರೀತ ಜನ, ವಾಹನಗಳು ನಿಂತು ಇಲ್ಲಿಂದ ಬೇರೆ ನಗರಕ್ಕೆ ಹೋಗುವ ವಾಹನ ಸವಾರರಿಗೆ ಕಿರಿಕಿರಿ ಉಂಟಾಗಿತ್ತು. ನಗರದ ಬಹುತೇಕ ಜನರು ಇಲ್ಲಿ ಬಂದು ಕುರಿಗಳ ಕೈಕಾಲುಗಳನ್ನು ಸ್ವಚ್ಚಗೊಳಿಸಿಕೊಂಡು ಹೋಗುತ್ತಿದ್ದರು. ಇನ್ನು ಕುರಿ ತಲೆ, ಕಾಲು ಸ್ವಚ್ಚಗೊಳಿಸುವವರಿಗೆ ಭಾರೀ ಪ್ರಮಾಣದ ಬೇಡಿಕೆ ಹೆಚ್ಚಿತ್ತು. ಇದೇ ಕಾರಣದಿಂದ ತೀರ ದುಬಾರಿ ಬೆಲೆಯಲ್ಲಿ ಕುರಿಯ ಕೈಕಾಲು ಸ್ವಚ್ಚಗೊಳಿಸಿಕೊಡುತ್ತಿರುವುದು ಕಂಡುಬಂತು .
ಕೆಟಿಜೆ ನಗರ ಸರ್ಕಲ್‌ನಲ್ಲಿ ಚರ್ಮದ ವ್ಯಾಪಾರ :
ಇನ್ನು ಕೆಟಿಜೆ ನಗರ ಸರ್ಕಲ್‌ನಲ್ಲಿ ಕುರಿಯ ಚರ್ಮದ ವ್ಯಾಪಾರಿಗಳು ಕುರಿಯ ಚರ್ಮವನ್ನು ಇಂತಿಷ್ಟು ಬೆಲೆ ನಿಗಧಿಪಡಿಸಿ ವ್ಯಾಪಾರ ಮಾಡಿಕೊಂಡು ವಾಹನದಲ್ಲಿ ತುಂಬುತ್ತಿದ್ದರು. ಒಂದು ಚರ್ಮಕ್ಕೆ 150 ರಿಂದ 160 ಹೀಗೆ ಅದರ ಗುಣಮಟ್ಟದ ಆಧಾರದ ಮೇಲೆ ಖರೀದಿ ಮಾಡಿಕೊಂಡು ತುಂಬುತ್ತಿದ್ದರು. ಕೆಟಿಜೆ ನಗರ ಸರ್ಕಲ್‌ನ ಚರಂಡಿ ಸೇತುವೆ ಮೇಲೆ ವಾಹನ ನಿಲ್ಲಿಸಿಕೊಂಡು ತುಂಬುತ್ತಿದ್ದರಿಂದ ವಾಹನ ಸವಾರರ ಸವಾರಿಗೆ ಹಿಂಸೆಯಾಯಿತು. ಇದರಿಂದ ಬೇಸತ್ತ ಕೆಲವು ವಾಹನ ಸವಾರರು ಚರ್ಮದ ವ್ಯಾಪಾರಿಗೆ ಸೈಡಲ್ಲಿ ನಿಲ್ಲಿಸುವಂತೆ ತಾಕೀತು ಮಾಡಿದ್ದರಿಂದ ಸೈಡಲ್ಲಿ ನಿಲ್ಲಿಸಿ ತಮ್ಮ ವ್ಯಾಪಾರ ಮುಂದುವರೆಸಿದರು. ಒಟ್ಟಾರೆ ಶ್ರೀ ದುಗ್ಗಮ್ಮ ದೇವಿಗೆ ಜಾತ್ರೆ ಜನಜಂಗುಳಿ ತುಂಬಿ ನಗರದೆಲ್ಲೆಡೆ ಸಂಭ್ರಮ ಮನೆಮಾಡಿತ್ತು.