ಮೈಸೂರು ವಿದ್ಯಾರ್ಥಿನಿಯ ಮೇಲಾದ ಸಾಮೂಹಿಕ ಅತ್ಯಾಚಾರ ಖಂಡಿಸಿ ಸಂಘಟನೆಗಳ ಪ್ರತಿಭಟನೆ
ದಾವಣಗೆರೆ: ಮೈಸೂರಿನಲ್ಲಿ ವಿದ್ಯಾರ್ಥಿನಿಯ ಮೇಲೆ ನಡೆದಿರುವ ಸಾಮೂಹಿಕ ಅತ್ಯಾಚಾರ ಖಂಡಿಸಿ, ಅಪರಾಧಿಗಳನ್ನು ಶೀಘ್ರವಾಗಿ ಪತ್ತೆ ಹಚ್ಚಿ ಹಾಗೂ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಉಪವಿಭಾಗಾಧಿಕಾರಿ ಕಚೇರಿ ಮುಂಭಾಗ ಎ.ಐ.ಎಂ.ಎಸ್.ಎಸ್., ಎ.ಐ.ಡಿ.ವೈ.ಓ ಮತ್ತು ಎ.ಐ.ಡಿ,ಎಸ್.ಓ ಸಂಘಟನೆಗಳ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಮೈಸೂರಿನಲ್ಲಿ ಹಾಡಹಗಲೇ ಡಕಾಯಿತಿ ನಡೆಸಿ ಶೂಟೌಟ್ ಮಾಡಿದ ಪ್ರಕರಣವು ಜನರ ಮನಸ್ಸಿನಿಂದ ಮಾಸುವ ಮುಂಚೆಯೇ, ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವುದು ಜನತೆಯನ್ನು ಬೆಚ್ಚಿಬೀಳಿಸಿದೆ. ಘಟನೆಗೆ ಸಂಬಂಧಿಸಿದಂತೆ ಅತ್ಯಾಚಾರ ಮಾಡಿರುವ ಅಪರಾಧಿಗಳನ್ನು ಕೂಡಲೇ ಬಂಧಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಜ್ಯೋತಿ ಕುಕ್ಕುವಾಡ ಮಾತನಾಡಿ, ಕಾಲೇಜು ವಿದ್ಯಾರ್ಥಿನಿಯರು ಪ್ರೇಕ್ಷಣೀಯಾ ಸ್ಥಳಗಳಿಗೆ ಹೋದಾಗ ಹುಡುಗರು ಹಿಂಬಾಲಿಸುವುದು ಹಾಗೂ ಚುಡಾಯಿಸುವುದು ಎಲ್ಲೆಡೆ ನಡೆಯುತ್ತಲೇ ಇದೆ. ಮಹಿಳೆಯರ ಮೇಲಿನ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕಕಾರಿಯಾಗಿದೆ. ಪೊಲೀಸರು ಇಂತಹ ಜನ ನಿಬಿಡ ಸ್ಥಳಗಳಲ್ಲಿ ಗಸ್ತು ತಿರುಗುವ ಮೂಲಕ ಮಹಿಳೆಯರಿಗೆ ರಕ್ಷಣೆ ನೀಡಬೇಕೆಂದು ಆಗ್ರಹಿಸಿದರು.
ಎಐಡಿವೈಓ ನ ಸಂಘಟನಾಕಾರರಾದ ಪರಶುರಾಮ್ ಮಾತನಾಡಿ, ಒಂದೆಡೆ ಮೈಸೂರು ಶಿಕ್ಷಣ ಕೇಂದ್ರವಾಗಿದ್ದು, ಬೇರೆ ರಾಜ್ಯಗಳಿಂದ ವಿದ್ಯಾರ್ಥಿನಿಯರು ವಿದ್ಯಾಭ್ಯಾಸಕ್ಕೆ ಬರುತ್ತಾರೆ. ಮತ್ತೊಂದೆಡೆ ಇಂತಹ ಘಟನೆಗಳಿಂದ ಪೋಷಕರು ಅವರನ್ನು ಅಲ್ಲಿಗೆ ಕಳುಹಿಸಿಲು ಹಿಂದೇಟು ಹಾಕುವಂತೆ ಮಾಡಬಹುದು. ಕೆಲವರು ಶಿಕ್ಷಣವನ್ನೇ ಮೊಟಕುಗೂಳಿಸಬಹುದು, ಆದ್ದರಿಂದ, ಇಂತಹ ಘಟನೆಗಳು ಮತ್ತೆ ಮರುಕಳಿಸಿದಂತೆ ಆಡಳಿತ ಹಾಗೂ ಪೊಲೀಸ್ ಇಲಾಖೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಪೂಜಾ ನಂದಿಹಳ್ಳಿ, ಭಾರತಿ, ಜ್ಯೋತಿ ಕುಕ್ಕುವಾಡ, ಕುಮುದಾ, ಸೌಮ್ಯಾ, ಮಮತ, ಪುಷ್ಪ, ಕಾವ್ಯ, ಪರಶುರಾಮ್, ಗುರು ಇನ್ನೂ ಮುಂತಾದವರು ಭಾಗವಹಿಸಿದ್ದರು.