ನಮ್ಮ ಸರ್ಕಾರದ ಭವಿಷ್ಯ ಹೇಳುವ ಮುನ್ನ ಸಿದ್ದರಾಮಯ್ಯ ತಾವು ಸಿಎಂ ಅಗ್ತಾರಾ ಎಂದು ಭವಿಷ್ಯ ಹೇಳಿಕೊಳ್ಳಲಿ: ಸಚಿವ ಭೈರತಿ ತಿರುಗೇಟು

ದಾವಣಗೆರೆ: ನಮ್ಮ ಸರ್ಕಾರ ಟೇಕಾಫ್ ಆಗಿಲ್ಲ ಎಂದು ಹೇಳುವ ಸಿದ್ದರಾಮಯ್ಯ ಸರ್ಕಾರವೇನು ಟೆಕಾಫ್ ಆಗಿ ಹಂಗೇ ಆಕಾಶದಲ್ಲಿ ಹಾರ್ಕೊಂಡು ಹೋಗಿತ್ತಾ? ನಮ್ಮ ಸರ್ಕಾರಕ್ಕೆ ಭವಿಷ್ಯವಿಲ್ಲ ಎಂದು ಹೇಳುವ ಇವರು ಮೊದಲು ತಮ್ಮ ಭವಿಷ್ಯ ನೋಡಿಕೊಳ್ಳಲಿ ಎಂದು ಸಚಿವ ಭೈರತಿ ಬಸವರಾಜ್ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದರು.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡದ ಅವರು, ನಮ್ಮ ಸರ್ಕಾರ ಬೀಳುತ್ತೆ ಅನ್ನೋದು ಸರಿಯಲ್ಲ, ಇವರೇನು ಭವಿಷ್ಯ ಹೇಳುತ್ತಾರ? ಕಾಂಗ್ರೆಸ್ ನಲ್ಲಿ ಎಲ್ಲರು ಒಬ್ಬರಿಗೊಬ್ಬರು ಕಿತ್ತಾಡುತ್ತಿದ್ದಾರೆ. ಮೊದಲು ಇವರ ಭವಿಷ್ಯ ಇವರು ನೋಡಿಕೊಳ್ಳಲಿ, ಸಿಎಂ ಆಗುತ್ತಾರ ಅಥವಾ ಇಲ್ಲವಾ ಅಂತ ತಮ್ಮ ಭವಿಷ್ಯ ಹೇಳಲಿ ಎಂದು ಟಾಂಗ್ ಕೊಟ್ಟರು.
ಸಿಎಂ ಬಸವರಾಜ್ ಬೊಮ್ಮಾಯಿ ಅವರು ಅಧಿಕಾರ ವಹಿಸಿಕೊಂಡು ಇನ್ನೂ ಎಂಟತ್ತು ದಿನಗಳಾಗಿಲ್ಲ. ಆಗಲೇ ನಾಲ್ಕು ಜಿಲ್ಲೆಯ ಪ್ರವಾಸ ಮಾಡಿದ್ದಾರೆ. ಅಧಿಕಾರಿಗಳೊಂದಿಗೆ ಸತತವಾಗಿ ಸಭೆ ನಡೆಸುತ್ತಿದ್ದಾರೆ. ಕೋವಿಡ್ ನಿಯಂತ್ರಣ ಕುರಿತು ಶತಪ್ರಯತ್ನ ಮಾಡುತ್ತಿದ್ದಾರೆ. ರಾಜ್ಯದ ಅಭಿವೃದ್ದಿಗೆ ಆರು ಸಾವಿರ ಕೋಟಿ ಅನುದಾನ ಕೊಡುತ್ತೇವೆ ಎಂದಿದ್ದಾರೆ. ಹಾಗಾದರೆ ಇದು ಅಭಿವೃದ್ಧಿ ಅಲ್ಲವಾ ಎಂದು ಪ್ರಶ್ನಿಸಿದ ಭೈರತಿ ಬಸವರಾಜ್, ಗಡಿಜಿಲ್ಲೆಗಳಿಗೆ ಒಮ್ಮೆಯೂ ಭೇಟಿ ನೀಡದೆ ಕೂತಲ್ಲೆ ಏನೋ ಒಂದು ಹೇಳೋದನ್ನು ಸಿದ್ದರಾಮಯ್ಯ ಬಿಡಬೇಕು ಎಂದಿದ್ದಾರೆ.
ಇಂದಿರಾ ಕ್ಯಾಂಟಿನ್ ಹೆಸರು ಬದಲಾವಣೆ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಗುರುವಾರ ಕ್ಯಾಬಿನೆಟ್ ಮೀಟಿಂಗ್ ನಡೆಯಲಿದ್ದು, ಹೆಸರು ಬದಲಾವಣೆಯ ಬಗ್ಗೆ ಅಲ್ಲಿ ಸಾಧಕ-ಬಾಧಕ ಚರ್ಚೆ ಮಾಡುತ್ತೇವೆ. ಕೊನೆಯಲ್ಲಿ ಈ ಬಗ್ಗೆ ಸಿಎಂ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದರು.