ಉಕ್ರೇನ್ನಲ್ಲಿ ಸಾವನ್ನಪ್ಪಿದ್ದ ನವೀನ್ ಮೃತದೇಹ ಪತ್ತೆ : ಸಿಎಂ ಬೊಮ್ಮಾಯಿ

1

ಹಾವೇರಿ: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ವೇಳೆ ರಷ್ಯಾದ ಶೆಲ್ ದಾಳಿಗೆ ಸಿಲುಕಿ ಸಾವನ್ನಪ್ಪಿದ್ದ ಹಾವೇರಿ ಜಿಲ್ಲೆ, ರಾಣೇಬೆನ್ನೂರು ತಾಲ್ಲೂಕಿನ ಚಳಗೇರಿಯ ನವೀನ್ ಮೃತದೇಹ ಪತ್ತೆಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ. ಈ ಕುರಿತು ಮಂಗಳವಾರ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಅವರು, “ಉಕ್ರೇನ್ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಚಳಗೇರಿಯ ವೈದ್ಯಕೀಯ ವಿದ್ಯಾರ್ಥಿ ನವೀನ್ ಮೃತದೇಹ ಸಿಕ್ಕಿದೆ. ಉಕ್ರೇನಿನ ಶವಾಗಾರದಲ್ಲಿ ಮೃತದೇಹ ಇರಿಸಲಾಗಿದೆ. ಯುದ್ಧ ಇನ್ನೂ ನಡೆಯುತ್ತಿದೆ” ಎಂದು ಹೇಳಿದ್ದಾರೆ.
“ನವೀನ್ ಮೃತ ದೇಹವನ್ನು ತಾಯ್ನಾಡಿಗೆ ತರುವ ಬಗ್ಗೆ ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರ ಜತೆ ಮಾತನಾಡಿದ್ದೇನೆ. ರಾಯಭಾರಿ ಕಚೇರಿ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದೇವೆ. ಹದಿಮೂರನೇ ದಿನವೂ ಉಕ್ರೇನ್- ರಷ್ಯಾ ಯುದ್ಧ ನಡೆಯುತ್ತಿದೆ. ಜೊತೆಗೆ ಉಕ್ರೇನ್ನಲ್ಲಿ ರಷ್ಯಾ ಶೆಲ್ ದಾಳಿ ನಡೆಸುತ್ತಿದೆ. ಅದು ನಿಂತ ಮೇಲೆ ಮೃತ ದೇಹ ತರುವ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಮಾತ್ರವಲ್ಲದೆ, ಬಿ.ಎಸ್. ಯಡಿಯೂರಪ್ಪ ಸೇರಿದಂತೆ ವಿವಿಧ ರಾಜಕೀಯ ನಾಯಕರು ಚಳಗೇರಿಯ ನವೀನ್ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದರು. ನವೀನ್ ಕುಟುಂಬಸ್ಥರು ಮಾತ್ರ ನವೀನ್ ಮೃತದೇಹವಾದರೂ ಭಾರತಕ್ಕೆ ಮರಳಬೇಕು ಎಂಬ ಇಚ್ಛೆ ವ್ಯಕ್ತಪಡಿಸಿದ್ದಾರೆ. ಆದರೆ, ಅದು ಸಾಧ್ಯವೇ ಇಲ್ಲವೇ ಎಂಬ ಬಗ್ಗೆ ಹಲವು ರಾಜಕಾರಣಿಗಳು ಹೇಳಿಕೆ ನೀಡುತ್ತಿದ್ದರು. ಸರ್ಕಾರ ತನ್ನ ಪ್ರಯತ್ನ ತಾನು ಮಾಡುತ್ತಿದೆ ಎಂದು ಹೇಳುತ್ತಲೇ ಬಂದಿತ್ತು. ಉಕ್ರೇನ್ನಲ್ಲಿ ಮೃತಪಟ್ಟ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲ್ಲೂಕಿನ ನವೀನ್ ನಿವಾಸಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಿ, ನವೀನ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದರು. ಜೊತೆಗೆ ನವೀನ್ ತಂದೆಗೆ 25 ಲಕ್ಷ ರೂ. ಪರಿಹಾರ ಚೆಕ್ ನೀಡಿದ್ದರು.

 

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!