ನೀಟ್ ಪರೀಕ್ಷೆ ವಿರೋಧಿಸಿ ಎಸ್ಎಫ್ಐ ನಿಂದ ದೇಶಾದ್ಯಂತ ಪ್ರತಿಭಟನೆ
ದಾವಣಗೆರೆ: ದೇಶದಲ್ಲಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ವೈದ್ಯಕೀಯ ಮತ್ತು ಇತರೆ ಕೋರ್ಸ್ ಗಳಿಗೆ ಪ್ರವೇಶ ಪಡೆಯಲು ರಾಷ್ಟ್ರ ಮಟ್ಟದಲ್ಲಿ ನಡೆಸುವ ನೀಟ್ ಪರೀಕ್ಷೆ ಸಂವಿಧಾನ ವಿರೋಧಿಯಾಗಿದ್ದು ಈ ಪರೀಕ್ಷೆಯ ಮೂಲಕ ವೈದ್ಯಕೀಯ ಶಿಕ್ಷಣವನ್ನು ಕೇಂದ್ರ ಸರ್ಕಾರ ತನ್ನ ಹಿಡಿತದಲ್ಲಿಟ್ಟುಕೊಳ್ಳುವ ಹುನ್ನಾರ ಅಡಗಿದೆ. ಈ ಪರೀಕ್ಷೆಯಲ್ಲಿ ಇಂಗ್ಲಿಷ್, ಹಿಂದಿ ಭಾಷೆಯ ಅಭ್ಯರ್ಥಿಗಳೇ ಹೆಚ್ಚು ಪ್ರವೇಶ ಪಡೆಯುತ್ತಿದ್ದಾರೆ. ಈ ನೀಟ್ ಪರೀಕ್ಷೆಯಲ್ಲಿ ಗ್ರಾಮೀಣ ಪ್ರದೇಶದ ದಲಿತ, ಹಿಂದುಳಿದ, ಅಲ್ಪಸಂಖ್ಯಾತ, ತಳಸಮುದಾಯದ ವಿದ್ಯಾರ್ಥಿಗಳು ಲಕ್ಷಾಂತರ ರೂಪಾಯಿ ಸುರಿಯುವ ಶ್ರೀಮಂತ ,ಉನ್ನತ ಶೈಕ್ಷಣಿಕ ಸೌಲಭ್ಯವುಳ್ಳ ಅಭ್ಯರ್ಥಿಗಳ ಜೊತೆಗೆ ಪೈಪೋಟಿ ನಡೆಸಿ ಸೀಟು ಗಿಟ್ಟಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಇದರಿಂದ ಸಾಮಾಜಿಕ ನ್ಯಾಯ ಉಲ್ಲಂಘನೆಯಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ತಮಿಳುನಾಡು ಮತ್ತು ಇತರ ರಾಜ್ಯಗಳಲ್ಲಿ ಈ ನೀಟ್ ಪರೀಕ್ಷೆಯಿಂದ ಅನ್ಯಾಯಕ್ಕೊಳಗಾದ ಸುಮಾರು 22 ಜನ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಗುರಿಯಾಗಿದ್ದಾರೆ ಈ ಹಿನ್ನೆಲೆಯಲ್ಲಿ ತಮಿಳುನಾಡು ರಾಜ್ಯ ಸರ್ಕಾರ ಎ.ಕೆ. ರಾಜನ್ ರವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿದೆ ಈ ಸಮಿತಿಯು ತನ್ನ ವರದಿಯಲ್ಲಿ ಪರೀಕ್ಷೆಯ ತರಬೇತಿಗಾಗಿ ಪ್ರತಿವರ್ಷ ದೇಶದಲ್ಲಿ ಖಾಸಗಿ ಕೋಚಿಂಗ್ ಸೆಂಟರ್ ಹಾವಳಿ ಸುಮಾರು 16 ಸಾವಿರ ಕೋಟಿಯಷ್ಟು ದೊಡ್ಡ ಮಾಫಿಯಾ ನಡೆಯುತ್ತಿದೆ. ಒಬ್ಬ ವಿದ್ಯಾರ್ಥಿಗೆ ನೀಟ್ ಪರೀಕ್ಷೆಯ ಕೋಚಿಂಗ್ ಗೆ ಒಂದು ಲಕ್ಷದಿಂದ 5 ಲಕ್ಷದವರೆಗೆ ಹಣ ವಸೂಲಿ ನಡೆಯುತ್ತಿದೆ ಇದರಿಂದ ಹಣ ಬರಿಸಲು ಸಾಧ್ಯವಿಲ್ಲದ ಬಡಕುಟುಂಬದ ವಿದ್ಯಾರ್ಥಿಗಳು ಪರೀಕ್ಷೆಗೆ ಅರ್ಹತೆ ಪಡೆಯಲು ವಂಚಿತರಾಗುತ್ತಿದ್ದಾರೆ.
ಆದ್ದರಿಂದ ನೀಟ್ ಪರೀಕ್ಷೆಯನ್ನು ರದ್ದುಗೊಳಿಸದಿದ್ದರೆ ಬಡ, ಮಧ್ಯಮ ವರ್ಗದ ವಿದ್ಯಾರ್ಥಿಗಳ ಶೈಕ್ಷಣಿಕ ಹಕ್ಕುಗಳು ಕಿತ್ತುಕೊಂಡಂತೆ ಆಗುತ್ತಿದೆ. ಆದ್ದರಿಂದ ತಮಿಳುನಾಡು, ಕೇರಳ ಮುಂತಾದ ರಾಜ್ಯಗಳು ನೀಟ್ ಪರೀಕ್ಷೆಯನ್ನು ರದ್ದುಗೊಳಿಸಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುತ್ತಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಇದೇ ಮಾದರಿಯಲ್ಲಿ ರಾಜ್ಯ ಸರ್ಕಾರವೂ ಕರ್ನಾಟಕ ರಾಜ್ಯದಲ್ಲಿ ಸಹ ನೀಟ್ ಪರೀಕ್ಷೆಯನ್ನು ರದ್ದುಗೊಳಿಸಿ ಎ.ಕೆ ರಾಜನ್ ಸಮಿತಿಯ ಶಿಫಾರಸುಗಳನ್ನು ಜಾರಿಗೊಳಿಸಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಷನ್ ಎಸ್ಎಫ್ಐ ದಾವಣಗೆರೆ ಜಿಲ್ಲಾ ಸಮಿತಿ ಒತ್ತಾಯಿಸುತ್ತದೆ.