ಗಂಗಾಕಲ್ಯಾಣಕ್ಕೆ ನೂತನ ಸ್ಪರ್ಶ! ಫಲಾನುಭವಿಗಳ ಖಾತೆಗೆ ನೇರ ನಗದು ಪಾವತಿ
ಬೆಂಗಳೂರು: ಗಂಗಾ ಕಲ್ಯಾಣ ಯೋಜನೆಯಡಿ ಫಲಾನುಭವಿಗಳ ಖಾತೆಗೆ ಹಣ ನೇರ ವರ್ಗಾವಣೆ ಮಾಡುವ ಮೂಲಕ ಗಂಗಾ ಕಲ್ಯಾಣ ಯೋಜನೆಗೆ ಹೊಸ ಸ್ಪರ್ಶ ನೀಡಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಾಹಿತಿ ನೀಡಿದ್ದು ಗಂಗಾ ಕಲ್ಯಾಣ ಯೋಜನೆಯಲ್ಲಿ ಆಗುತ್ತಿದ್ದ ವಿಳಂಬ ಧೋರಣೆಗೆ ಸಂಪೂರ್ಣ ಬ್ರೇಕ್ ಬೀಳಲಿದೆ. ಗುರುವಾರ ಪ್ರಶ್ನೋತ್ತರ ವೇಳೆ ಕಾಂಗ್ರೆಸ್ನ ಸಿ.ಎಂ. ಇಬ್ರಾಹಿಂ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಮೊದಲು ಗಂಗಾ ಕಲ್ಯಾಣ ಯೋಜನೆಯಡಿ ವಿವಿಧ ಹಂತಗಳಲ್ಲಿ ಟೆಂಡರ್ ಪದ್ಧತಿ ಇತ್ತು. ಉದಾಹರಣೆಗೆ ಬೋರ್ವೆಲ್ ಕೊರೆಯಲು, ವಿದ್ಯುತ್ ಸಂಪರ್ಕ ಕಲ್ಪಿಸಲು ಟೆಂಡರ್ ಕರೆಯಲಾಗುತ್ತಿತ್ತು. ಗುತ್ತಿಗೆ ಪಡೆದ ವ್ಯಕ್ತಿ ಯೋಜನೆಯಡಿಯ ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸುತ್ತಿದ್ದಾನೆ. ಆದರೆ, ಈ ವ್ಯವಸ್ಥೆಯಲ್ಲಿ ಸೌಲಭ್ಯ ದೊರೆಯುವುದು ವಿಳಂಬವಾಗುತ್ತಿದೆ ಎನ್ನುವ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಯೋಜನೆಗೆ ಹೊಸ ಸ್ಪರ್ಶ ನೀಡಲಾಗಿದೆ ಎಂದರು.
ಅದರಂತೆ ನೇರವಾಗಿ ಫಲಾನುಭವಿಗಳ ಖಾತೆಗೆ ಈ ಯೋಜನೆಯಡಿ ಹಣ ಎರಡು ಮೂರು ಕಂತುಗಳಲ್ಲಿ ಪಾವತಿ ಆಗಲಿದೆ. ಅದರ ನೆರವಿನಿಂದ ಫಲಾನುಭವಿಯೇ ಯೋಜನೆಯ ಸೌಲಭ್ಯ ನೇರವಾಗಿ ಪಡೆಯಬಹುದು. ಗಂಗಾ ಕಲ್ಯಾಣದಡಿ ಎರಡು ಲಕ್ಷ ರೂ.ವರೆಗೆ ಸಹಾಯಧನ ದೊರೆಯಲಿದೆ ಎಂದು ಹೇಳಿದರು.
ಶಾದಿ ಮಹಲ್ ನಿಲ್ಲಿಸಲಾಗಿದೆ :
ಅಲ್ಪಸಂಖ್ಯಾತರಿಗೆ ಈ ಹಿಂದೆ 77 ಯೋಜನೆಗಳಿದ್ದವು. ಈಗ ಅವುಗಳನ್ನು 29ಕ್ಕೆ ಸೀಮಿತಗೊಳಿಸಲಾಗಿದೆ ಎಂದು ಸಿ.ಎಂ. ಇಬ್ರಾಹಿಂ ಕೇಳಿದಾಗ, ‘ಶಾದಿ ಮಹಲ್ ಹೊರತುಪಡಿಸಿ ಇನ್ನಾವುದೇ ಯೋಜನೆಗಳನ್ನು ಸ್ಥಗಿತಗೊಳಿಸಿಲ್ಲ. ಶಾದಿ ಮಹಲ್ ಅನ್ನು ಕಳೆದ ವರ್ಷದಿಂದ ನಿಲ್ಲಿಸಲಾಗಿದೆ. ಪಿಎಚ್.ಡಿ.ಗೆ ನೆರವು ಯೋಜನೆ ಸ್ಥಗಿತಗೊಂಡಿತ್ತು. ಪುನರಾರಂಭಗೊಳಿಸಲಾಗಿದೆ. ‘ಅರಿವು’ ಯೋಜನೆಗೆ ಕಳೆದ ಬಾರಿಗಿಂತ ಹೆಚ್ಚು ಅನುದಾನ ನೀಡಲಾಗಿದೆ. ಜಿಲ್ಲೆಗೊಂದು ಇರುವ ಅಬ್ದುಲ್ ಕಲಾಂ ಶಾಲೆಗಳನ್ನು 25 ಕೋಟಿ ರೂ.ಗಳಲ್ಲಿ ಮೇಲ್ದರ್ಜೆಗೇರಿಸಿ ಸಿಬಿಎಸ್ಇ ಪಠ್ಯದೊಂದಿಗೆ ಮಕ್ಕಳಿಗೆ ಶಿಕ್ಷಣ ನೀಡಲು ಉದ್ದೇಶಿಸಲಾಗಿದೆ ಎಂದರು.
ಅಲ್ಪಸಂಖ್ಯಾತ ಕಾಲೋನಿ ಅಭಿವೃದ್ಧಿ:
ಅಲ್ಪಸಂಖ್ಯಾತ ಕಾಲೋನಿಗಳನ್ನು ಕೊಳಚೆ ನಿರ್ಮೂಲನ ಮಂಡಳಿ ಮೂಲಕ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಹೆಚ್ಚು ಅಲ್ಪಸಂಖ್ಯಾತರು ವಾಸ ಮಾಡುವ ಕಾಲೋನಿಗಳನ್ನು ಗುರುತಿಸಿ, ವಿಶೇಷ ಕಾರ್ಯಕ್ರಮದಡಿ ಕೊಳಚೆ ನಿರ್ಮೂಲನ ಮಂಡಳಿ ಮೂಲಕ ಅಭಿವೃದ್ಧಿಪಡಿಸಲು ಚಿಂತನೆ ನಡೆಸಲಾಗಿದೆ ಎಂದರು.