ಮಾರ್ಚ್ 21ಕ್ಕೆ 15 ಸಾವಿರ ಶಿಕ್ಷಕರ ನೇಮಕಕ್ಕೆ ಅಧಿಸೂಚನೆ
ಬೆಂಗಳೂರು: ಕರ್ನಾಟಕದಲ್ಲಿ 6ರಿಂದ 8ನೇ ತರಗತಿಗಳಿಗೆ 15,000 ಶಿಕ್ಷಕರ ನೇಮಕಕ್ಕೆ ಇದೇ ಮಾರ್ಚ್ 21ಕ್ಕೆ ಅಧಿಸೂಚನೆ ಹೊರಡಿಸಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ. ಶಾಲೆಗಳ ಮತ್ತು ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಶಿಕ್ಷಕರ ನೇಮಕಕ್ಕೆ ಇಲಾಖೆಯು ಮುಂದಾಗಿದೆ. ಅದರ ಅಂಗವಾಗಿ ಹೈದರಾಬಾದ್- ಕರ್ನಾಟಕಕ್ಕೆ 5,000 ಹುದ್ದೆಗಳು ಮೀಸಲು ಇಡಲಾಗಿದೆ. ರಾಜ್ಯದ ಉಳಿದ ಕಡೆಗಳಿಗೆ 10 ಸಾವಿರ ಶಿಕ್ಷಕರ ನೇಮಕವಾಗಲಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ. ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಲ್ಲಿನ ಪದವೀಧರ ಪ್ರಾಥಮಿಕ ಶಿಕ್ಷಕ (6ರಿಂದ 8ನೇ ತರಗತಿ) ವೃಂದದ 5,000 ಹುದ್ದೆಗಳು ಹಾಗೂ ಉಳಿಕೆ ವೃಂದದ 10 ಸಾವಿರ ಒಟ್ಟಾರೆ 15,000 ಹುದ್ದೆಗಳನ್ನು ಜಿಲ್ಲಾವಾರು ಹುದ್ದೆಗಳ ಮರು ಹಂಚಿಕೆ ಉಲ್ಲೇಖ 02 ಏಕ ಕಡತದಲ್ಲಿ ಅನುಮೋದನೆ ಕೋರಿ ಸರ್ಕಾರಕ್ಕೆ ಸಲ್ಲಿಸಿ ಅನುಮೋದನೆ ನಿರೀಕ್ಷಿಸಿದೆ. ಸರ್ಕಾರದ ಅನುಮೋದನೆಯನ್ನು ನಿರೀಕ್ಷಿಸಿ ಪ್ರಸ್ತುತ ಜಿಲ್ಲಾವಾರು/ವಿಷಯವಾರು ಹುದ್ದೆಗಳ ಜಿಲ್ಲಾ ಹಂಚಿಕೆಯನ್ನು ಅನುಬಂಧದಲ್ಲಿ ಲಗತ್ತಿಸಿದೆ.
ಜಿಲ್ಲೆಗಳಿಗೆ ಹಂಚಿಕೆ ಮಾಡಲಾದ ವಿಷಯವಾರು/ಹುದ್ದೆಗಳಿಗೆ ಅನುಗುಣವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (ಆಡಳಿತ) ಕಚೇರಿಯ ನೋಡಲ್ ಅಧಿಕಾರಿ ಹಾಗೂ ವಿಷಯ ನಿರ್ವಾಹಕರ ಸಭೆಯನ್ನು ಆಯೋಜಿಸಿ, ಸಂಬ0ಧಪಟ್ಟ ಜಿಲ್ಲೆಗಳಿಂದ ಸೀಟ್ ಮ್ಯಾಟ್ರಿಕ್ಸ್ ಪಡೆದು ಅತಿ ಶೀಘ್ರವಾಗಿ ಜಿಲ್ಲಾವಾರು ನೇಮಕಾತಿ ಅಧಿಸೂಚನೆ ಯನ್ನು ಹೊರಡಿಸಿ ನೇಮಕಾತಿ ಪ್ರಕ್ರಿಯೆ ಮುಂದುವರೆಸುವ ಸಂಬ0ಧ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ. ವಿಶಾಲ್. ಆರ್ ಪತ್ರ ಹೊರಡಿಸಿದ್ದಾರೆ. ಇನ್ನು ಗಣಿತ ಶಿಕ್ಷಕರ ಕೊರತೆ ನೀಗಿಸಲು ಶಿಕ್ಷಣ ಇಲಾಖೆ ಮುಂದಾಗಿದೆ. ರಾಜ್ಯದಲ್ಲಿ 21 ಸಾವಿರ ಗಣಿತ ಶಿಕ್ಷಕರ ಹುದ್ದೆಗಳ ಕೊರತೆ ಬಿದ್ದಿದೆ. ಅಭ್ಯರ್ಥಿಗಳಿಗೆ ಆನ್‌ಲೈನ್ ಅರ್ಜಿಗೆ ಅವಕಾಶವಿದ್ದು, ಮಾರ್ಚ್ 23ರಿಂದ ಅರ್ಜಿ ಸಲ್ಲಿಸಬಹುದಾಗಿದೆ. ಎಪ್ರಿಲ್ 22 ರಂದು ಅರ್ಜಿ ಹಾಕಲು ಕೊನೆಯ ದಿನವಾಗಿದ್ದು, ಮೇ 21 ಮತ್ತು 22ರಂದು ಶಿಕ್ಷಕರ ಹುದ್ದೆಗೆ ಸಿಇಟಿ ಪರೀಕ್ಷೆ ನಿಗದಿಯಾಗಿದೆ. ಇನ್ನು 1ರಿಂದ 8ನೇ ತರಗತಿ ಶಾಲೆಗಳಲ್ಲಿ ಸುಮಾರು 36 ಸಾವಿರ ಶಿಕ್ಷಕರ ಕೊರತೆ ಇದೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.
ಪರೀಕ್ಷೆ ವಿವರ :
ಒಟ್ಟು 400 ಅಂಕಗಳಿಗೆ ಪರೀಕ್ಷೆ ನಡೆಯಲಿದೆ. ಮೊದಲ ಪತ್ರಿಕೆ ಜನರಲ್ ಪೇಪರ್ ಆಗಿದ್ದು, 150 ಅಂಕ ನಿಗದಿಯಾಗಿದೆ. 2ನೇ ಪತ್ರಿಕೆಗಾಗಿ 150 ಅಂಕಗಳು ಇರುತ್ತವೆ. ವಿಷಯವಾರು ಪರೀಕ್ಷೆ ಇದಾಗಿರುತ್ತದೆ. ತೇರ್ಗಡೆ ಆಗಲು 45 ಅಂಕಗಳು ಕಡ್ಡಾಯವಾಗಿರುತ್ತವೆ. 3ನೇ ಪತ್ರಿಕೆ ಭಾಷಾವಾರು ಪರೀಕ್ಷೆಯಾಗಿದ್ದು, 100 ಅಂಕಗಳಿಗೆ ಪರೀಕ್ಷೆ ನಡೆಯಲಿದೆ. ಪಾಸ್ ಆಗಲು 50 ಅಂಕಗಳು ಕಡ್ಡಾಯವಾಗಿದೆ. ಎಂಜಿನಿಯರಿ0ಗ್ ಪದವಿ ಮುಗಿಸಿದ ಅಭ್ಯರ್ಥಿಗಳು ಕೂಡ ಈ ಬಾರಿ ಗಣಿತ ಶಿಕ್ಷಕ ನೇಮಕಾತಿ ಪರೀಕ್ಷೆ ಬರೆಯ ಬಹುದು. ಈ ಬಾರಿ ವಯೋಮಿತಿ 2 ವರ್ಷ ಸಡಲಿಕೆ ಮಾಡಲಾಗಿದೆ. 45 ವರ್ಷದಿಂದ 47 ವರ್ಷಕ್ಕೆ ಏರಿಕೆ ಮಾಡಲಾಗಿದೆ. ಇದು ಎಸ್‌ಸಿ, ಎಸ್‌ಟಿ ಮತ್ತು ಅಂಗವಿಕಲರಿಗೆ ಅನ್ವಯವಾಗುತ್ತದೆ. ಮಂಗಳಮುಖಿಯರಿಗೆ ವಿಶೇಷವಾಗಿ ಶೇ.1ರಷ್ಟು ಮೀಸಲು ಇಡಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಮಾಹಿತಿ ನೀಡಿದರು.