ಓರ್ವ ವ್ಯಕ್ತಿಗೆ ಕೋವಿಡ್.! ಸಿಟಿ ದರ 23 ಹಿನ್ನೆಲೆ ಜಿನೊಮಿಕ್ ಪರೀಕ್ಷೆಗೆ ಕಳಿಸಲಿರುವ ವೈದ್ಯರು.!

ದಾವಣಗೆರೆ: ಜಗಳೂರು ತಾಲ್ಲೂಕಿನ 22 ವರ್ಷ ವಯಸ್ಸಿನ ಪುರುಷ, ಸಾಮಾನ್ಯ ಜ್ವರದ ಜೊತೆಗೆ ಮೈ-ಕೈ ನೋವು ಎಂದು ದಿನಾಂಕ 09.01.2023 ರಂದು ಸಾರ್ವಜನಿಕ ಆಸ್ಪತ್ರೆ, ಜಗಳೂರು ಇಲ್ಲಿಗೆ ತೆರಳಿದಾಗ ಅಂದು ಕೋವಿಡ್ ಮಾದರಿ ಸಂಗ್ರಹಿಸಿ ದಾವಣಗೆರೆಯ ಚಿಗಟೇರಿ ಸಾರ್ವಜನಿಕ ಆಸ್ಪತ್ರೆಯ ಪ್ರಯೋಗಶಾಲೆಯಲ್ಲಿ ಪರೀಕ್ಷಿಸಿದಾಗ ಕೋವಿಡ್ ಎಂದು ದಿನಾಂಕ 10.01.2023 ರಂದು ದೃಢಪಟ್ಟಿರುತ್ತದೆ. ಪ್ರಸ್ತುತ ರೋಗ ಲಕ್ಷಣ ಚಿಕಿತ್ಸೆ ಪಡೆದು ಮಾರ್ಗಸೂಚಿಯನ್ವಯ ಮನೆಯಲ್ಲಿ ಪ್ರತ್ಯೇಕವಾಗಿರುತ್ತಾರೆ. ಸದರಿಯವರು 2 ಡೋಸ್ ಲಸಿಕೆ ಜೊತೆಗೆ ಬೂಸ್ಟರ್ ಡೋಸ್ ಲಸಿಕೆಯನ್ನು ಸಹ ಪಡೆದಿರುತ್ತಾರೆ.
ಆರೋಗ್ಯ ಇಲಾಖೆಯ ಸಿಬ್ಬಂದಿಯವರು ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಸದರಿಯವರು ಕಳೆದ 7 ದಿನಗಳಲ್ಲಿ ಎಲ್ಲಿಯೂ ಪ್ರಯಾಣ ಮಾಡಿರುವುದಿಲ್ಲ. ಇವರ ಮನೆಯಲ್ಲಿ 6 ಜನರಿದ್ದು, ಯಾರಿಗೂ ಆರೋಗ್ಯ ಸಮಸ್ಯೆ ಉಂಟಾಗಿರುವುದಿಲ್ಲ ಹಾಗೂ ಎಲ್ಲರೂ ಆರೋಗ್ಯವಾಗಿರುತ್ತಾರೆ. ಎಲ್ಲರೂ ಪ್ರಾಥಮಿಕ ಸಂಪರ್ಕಿತರಾಗಿದ್ದು, ಎಲ್ಲರ ಮಾದರಿಗಳನ್ನು ಪರೀಕ್ಷೆಗಾಗಿ ಸಂಗ್ರಹಿಸಲಾಗಿದೆ. ಮಾರ್ಗಸೂಚಿಗಳ ಪ್ರಕಾರ ಇವರ ಸಿ.ಟಿ. ದರ 23 ಇರುವುದರಿಂದ ಜಿನೊಮಿಕ್ ಪರೀಕ್ಷೆಗೆ ಕಳುಹಿಸಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.