Onion Price: ಈರುಳ್ಳಿ ಸುರಿದು ಪ್ರತಿಭಟನೆ: ಕ್ವಿಂಟಾಲ್ 2 ಸಾವಿರ ಬೆಂಬಲ ಬೆಲೆ ಘೋಷಿಸುವಂತೆ ಒತ್ತಾಯ
ದಾವಣಗೆರೆ: ಈರುಳ್ಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಹುಚ್ಚವ್ವನಹಳ್ಳಿ ಮಂಜುನಾಥ ಬಣ)ದ ರೈತರು ನಗರದ ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ಬುಧವಾರ ರಸ್ತೆಗೆ ಈರುಳ್ಳಿ ಸುರಿದು ಪ್ರತಿಭಟನೆ ನಡೆಸಿದರು.
ಇದೇ ವೇಳೆ ಸೇನೆಯ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ಮಾತನಾಡಿ, ರೈತರು ಕಳೆದ ಕೆಲವು ವರ್ಷದಿಂದ ಕನಿಷ್ಠ ಬೆಂಬಲ ಬೆಲೆ ಕಾಯ್ದೆ ರೂಪಿಸುವಂತೆ ಸತತವಾಗಿ ಒತ್ತಾಯಿಸುತ್ತಿದ್ದರೂ ಕೇಂದ್ರ ಸರ್ಕಾರ ಕಿವುಡಾಗಿದೆ, ರೈತರ ಪರವಾಗಿ ಕಾನೂನುಗಳನ್ನು ರೂಪಿಸದೆ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆಗೆ ಕಾಯ್ದೆ ರೂಪಿಸಿದ್ದರೆ ಇವತ್ತು ರೈತರು ಸಂಕಷ್ಟ ಅನುಭವಿಸುವ ಪರಿಸ್ಥಿತಿಗೆ ಬರುತ್ತಿರಲಿಲ್ಲ. ಆದ್ದರಿಂದ ರೈತರ ಬೆಳೆಗೆ ಇನ್ನಾದರೂ ಸರ್ಕಾರ ಕನಿಷ್ಠ ಬೆಂಬಲ ಬೆಲೆ ಕಾಯ್ದೆ ರೂಪಿಸುಬೇಕು ಎಂದು ಆಗ್ರಹಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಳೆದ ೪ ವರ್ಷದಿಂದ ಈರುಳ್ಳಿಗೆ ಕನಿಷ್ಠ ಬೆಂಬಲ ಬೆಲೆ ಘೋಷಿಸಿಲ್ಲ. ಹಿಂದೆ ಒಂದು ಕ್ವಿಂಟಾಲ್ ಈರುಳ್ಳಿಗೆ ೮೦೦ ರೂ., ನಿಗದಿ ಮಾಡಲಾಗಿತ್ತು. ಈಗೇನಾದರೂ ಬೆಂಬಲ ಬೆಲೆಗೆ ಕಾಯ್ದೆ ರೂಪಿಸಿದ್ದರೆ ಕನಿಷ್ಠ ಒಂದು ಕೆಜಿಗೆ ೮ ರೂ. ಬೆಲೆ ಇರುತ್ತಿತ್ತು. ಆದರೆ ಈಗ ಮಾರುಕಟ್ಟೆಯಲ್ಲಿ ಕೇವಲ ಒಂದು ರೂ.ಗೆ ಈರುಳ್ಳಿ ಮಾರಾಟವಾಗುತ್ತಿದ್ದು, ರೈತರು ಸಂಕಷ್ಟ ಅನುಭವಿಸುವಂತಾಗಿದೆ ಎಂದು ಬೇಸರ ಹೊರಹಾಕಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಂದು ಕ್ವಿಂಟಾಲ್ ಈರುಳ್ಳಿಗೆ ೨ ಸಾವಿರ ಬೆಂಬಲ ಬೆಲೆ ಘೋಷಿಸುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಆಲೂರು ಪರಶುರಾಮ, ಬೂದಿಹಾಳ್ ಭಗತ್ ಸಿಂಹ, ಕಾಡಜ್ಜಿ ಪ್ರಕಾಶ್, ಹೂವಿನಮಡು ನಾಗರಾಜ, ನಿರಗನಹಳ್ಳಿ ನಾಗರಾಜ, ಹುಚ್ಚವ್ವನಹಳ್ಳಿ ಹನುಮಂತ, ಕೋಲ್ಕುಂಟೆ ಹುಚ್ಚೆಂಗಪ್ಪ ಸೇರಿದಂತೆ ಇತರರು ಇದ್ದರು.