ದಾವಣಗೆರೆ : ಸಾರ್ವತ್ರಿಕ ವಿಧಾನಸಭೆಗೆ ಮೇ 10 ರಂದು ಮತದಾನ ನಡೆಯುತ್ತಿದ್ದು ಈ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಮತ್ತು ಯಶಸ್ವಿಗೊಳಿಸಲು ಮತದಾರರು ತಮ್ಮ ಮತಗಟ್ಟೆಯ ಮಾಹಿತಿಯನ್ನು ಹೊಂದಲಿ ಎನ್ನುವ ಉದ್ದೇಶದಿಂದ ರಾಜ್ಯಾದ್ಯಂತ ನಮ್ಮ ನಡೆ, ಮತಗಟ್ಟೆ ಕಡೆ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದರು.
ಅವರು ಭಾನುವಾರ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಸ್ವೀಪ್ ಸಮಿತಿಯಿಂದ ನಮ್ಮ ನಡೆ, ಮತಗಟ್ಟೆ ಕಡೆ ಕಾರ್ಯಕ್ರಮದ ಅಂಗವಾಗಿ ಮತದಾನ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಕಳೆದ ಚುನಾವಣೆಗಿಂದ ಶೇ 10 ರಷ್ಟು ಮತದಾನ ಹೆಚ್ಚಳವಾಗಬೇಕು, ಈ ಮೂಲಕ ಶೇ 90 ರಷ್ಟು ಮತದಾನ ಈ ಚುನಾವಣೆಯಲ್ಲಿ ನಡೆಯಬೇಕು. ದಾವಣಗೆರೆ ನಗರದಲ್ಲಿ ಮತಗಟ್ಟೆ ಎಲ್ಲಿವೆ ಎಂಬ ಬಗ್ಗೆ ಅರಿಯಲಿ, ಮತದಾನದಂದು ತಮ್ಮ ಮತಗಟ್ಟೆ ಸ್ಥಳದ ಗೊಂದಲ ಉಂಟಾಗದಂತೆ ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿದೆ.
ಮತದಾರರಿಗೆ ತಮ್ಮ ಮತಗಟ್ಟೆಯ ಮಾಹಿತಿಯನ್ನು ಅರಿತು ಖಾತರಿಪಡಿಸಿಕೊಳ್ಳಲು ಈ ದಿನವನ್ನು ಮೀಸಲಿರಿಸಲಾಗಿದೆ. ಮಾಹಿತಿ ಹೊಂದುವ ಮೂಲಕ ಮತದಾನ ದಿನದಂದು ನೈತಿಕ, ನಿರ್ಭೀತರಾಗಿ ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೇ ಮತದಾನ ಮಾಡಲು ಮನವಿ ಮಾಡಿದರು.
ಯುವ ನಟ, ಯುವ ಮತದಾರ, ಜಿಲ್ಲಾ ಸ್ವೀಪ್ ಐಕಾನ್ ಪೃಥ್ವಿ ಶಾಮನೂರು ಯುವ ಮತದಾರರಿಗೆ ತಯಾರಿಸಿದ 18 ರ ಕೇಕ್ ಕತ್ತರಿಸುವ ಮೂಲಕ ನಾವೆಲ್ಲರೂ ನಮ್ಮ, ನಮ್ಮ ಮಕ್ಕಳ ಭವಿಷ್ಯಕ್ಕಾಗಿ ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೇ ಮತದಾನದಲ್ಲಿ ಪಾಲ್ಗೊಳ್ಳುವ ಮೂಲಕ ನಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳೋಣ, ನಾನು ಸಹ ಇದೇ ಮೊದಲ ಭಾರಿಗೆ ಮತದಾನ ಮಾಡುತ್ತಿದ್ದು ಎಲ್ಲಾ ಯುವ ಮತದಾರರು ಮತದಾನ ಮಾಡಿ ಎಂದು ಕರೆ ನೀಡಿದರು.
ವಿಶೇಷ ಚೇತನರ ಸ್ವೀಪ್ ಜಿಲ್ಲಾ ಐಕಾನ್ ದುರುಗೇಶ್ ಮಾತನಾಡಿ ಯಾವುದೇ ಆಸೆಗೆ ಒಳಗಾಗದೇ ಶೇ 100 ರಷ್ಟು ಮತದಾನ ಮಾಡೋಣ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷರಾದ ಸುರೇಶ್ ಇಟ್ನಾಳ್ ಮತದಾರರ ಪ್ರತಿಜ್ಞಾವಿಧಿ ಬೋಧಿಸಿದರು.
ಸರ್ಕಾರಿ ನೌಕರರ ಸಂಘದಿಂದ ಆಯೋಜಿಸಲಾದ ಮತದಾರರ ಜಾಗೃತಿ ಬೈಕ್ ರ್ಯಾಲಿಯನ್ನು ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಧಿಕಾರಿಯವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ರ್ಯಾಲಿಯು ವಿದ್ಯಾರ್ಥಿಭವನ, ಕೆಇಬಿ ವೃತ್ತ, ಅಂಬೇಡ್ಕರ್ ವೃತ್ತ, ಅರುಣ ಚಿತ್ರಮಂದಿರ ಮಾರ್ಗದಲ್ಲಿ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಸಾಗಿತು.
ಜಿಲ್ಲಾ ರಕ್ಷಣಾಧಿಕಾರಿ ಡಾ; ಅರುಣ್.ಕೆ, ಪಾಲಿಕೆ ಆಯುಕ್ತರು ಹಾಗೂ ಚುನಾವಣಾಧಿಕಾರಿ ರೇಣುಕಾ, ಶ್ರೀನಿವಾಸ್, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಮಲ್ಲನಾಯ್ಕ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಫಾಲಾಕ್ಷ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಮತ್ತು ಕಾಲೇಜಿನ ವಿದ್ಯಾರ್ಥಿಗಳು, ಸ್ವ ಸಹಾಯ ಸಂಘದ ಸದಸ್ಯರು ಭಾಗವಹಿಸಿದ್ದರು.
