Oxygen Generation plant: ಜಿಲ್ಲಾಸ್ಪತ್ರೆಯಲ್ಲಿ 3 ಸಾವಿರ ಎಲ್‌ಪಿಎಂ ಸಾಮರ್ಥ್ಯದ ಆಕ್ಸಿಜನ್ ಉತ್ಪಾದನಾ ಘಟಕಕ್ಕೆ ಚಾಲನೆ ನೀಡಿದ ಸಂಸದ ಜಿ ಎಂ ಸಿದ್ದೇಶ್ವರ

ದಾವಣಗೆರೆ: ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಿಕೊಂಡು ನಗರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಟೆಂಡರ್ ಕರೆಯಲಾಗುತ್ತದೆ. ಟೆಂಡರ್‌ನಲ್ಲಿ ಅತೀ ಹೆಚ್ಚು ಯಾರು ಟೆಂಡರ್ ಬಿಡ್ ಹಾಕಿರುತ್ತಾರೋ ಅಂತಹವರಿಗೆ ಕಾಲೇಜು ಸ್ಥಾಪಿಸಲು ಸರ್ಕಾರ ಅನುಮತಿ ನೀಡುತ್ತದೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಹೇಳಿದರು.

ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ಗುರುವಾರ 2 ಸಾವಿರ ಎಲ್‌ಪಿಎಂ ಮತ್ತು 1 ಸಾವಿರ ಲೀಟರ್ ಎಲ್‌ಪಿಎಂ ಸಾಮರ್ಥ್ಯದ ಎರಡು ಆಕ್ಸಿಜನ್ ಉತ್ಪಾದನಾ ಘಟಕಗಳಿಗೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಸರ್ಕಾರಿ ವೈದ್ಯಕೀಯ ಕಾಲೇಜನ್ನು ಪಿಪಿಪಿ ಮಾದರಿಯಲ್ಲಿ ಸ್ಥಾಪಿಸಲು ಸರ್ಕಾರ ಮುಂದಾಗಿದ್ದು, ದಾವಣಗೆರೆಯಲ್ಲಿ ಸ್ಥಾಪನೆಗೆ ಅನುಮತಿ ನೀಡಲಾಗಿದೆ. ಕಾಲೇಜು ಸ್ಥಾಪನೆಗೆ ಒಂದಿಷ್ಟು ತಾಂತ್ರಿಕ ಸಮಸ್ಯೆ ಇದೆ ಎಂದು ತಿಳಿಸಿದರು.

ಕೊರೋನಾ ಸಂಕಷ್ಟದ ಪರಿಸ್ಥಿತಿಯಲ್ಲಿ ಆಕ್ಸಿಜನ್ ಸಮಸ್ಯೆ ತೀವ್ರವಾಗಿ ಕಾಡಿತ್ತು. ದೇಶಾದ್ಯಂತ ಇಂದಿನ ಆಕ್ಸಿಜನ್ ಉತ್ಪಾದನಾ ಘಟಕಗಳನ್ನು ಇಂದೇ ಉದ್ಘಾಟಿಸಲು ಮುಂದಾಗಿದೆ. ಅದರಂತೆ 1 ಸಾವಿರ ಲೀಟರ್ ಎಲ್‌ಪಿಎಂ ಸಾಮರ್ಥ್ಯ ಹಾಗೂ 2 ಸಾವಿರ ಲೀಟರ್ ಎಲ್‌ಪಿಎಂ ಸಾಮರ್ಥ್ಯದ ಆಕ್ಸಿಜನ್ ಘಟಕ ಹೀಗೆ ಜಿಲ್ಲಾಸ್ಪತ್ರೆ ಆವರಣದಲ್ಲೇ 2 ಆಕ್ಸಿಜನ್ ಉತ್ಪಾದನಾ ಘಟಕ ಕಾರ್ಯಾರಂಭ ಮಾಡಿವೆ. ಒಂದನ್ನು ಡಿಆರ್‌ಡಿಓ ಮತ್ತೊಂದನ್ನು ಪಿಎಸ್‌ಎನಿಂದ ಸ್ಥಾಪಿಸಲಾಗಿದೆ ಎಂದು ಅವರು ಹೇಳಿದರು.

ಯಾವುದೇ ಜಿಲ್ಲೆಯಲ್ಲೂ ಆಕ್ಸಿಜನ್ ಕೊರತೆಯಾಗದೇ, ಎಲ್ಲಾ ವರ್ಗದ ಜನರೂ ಸುರಕ್ಷಿತವಾಗಿರಬೇಕು ಎಂಬ ಕಾರಣಕ್ಕೆ ವಿದೇಶದಿಂದಲೂ ಆಕ್ಸಿಜನ್ ತರಿಸಿದ್ದನ್ನು ನೋಡಿದ್ದೇವೆ. ಇಡೀ ದೇಶದಲ್ಲಿ ಕೊರೋನಾ ಆರಂಭವಾದಾಗ ೧ ಲಕ್ಷ ಸಾಮರ್ಥ್ಯದ ಆಕ್ಸಿಜನ್ ಘಟಕ ಉತ್ಪಾದನೆಯಾಗಿದ್ದು, ಈಗ ೪-೫ ಲಕ್ಷ ಲೀಟರ್ ಆಕ್ಸಿಜನ್ ಉತ್ಪಾದನೆಯಾಗುತ್ತಿದೆ. ಪ್ರಧಾನಿಯವರು ದೇಶದ ಎಲ್ಲಾ ವರ್ಗದ ಜನರ ಜೀವ ಉಳಿಸಲು ಪ್ರತಿ ಜಿಲ್ಲೆಯಲ್ಲೂ ಆಕ್ಸಿಜನ್ ಉತ್ಪಾದನಾ ಘಟಕ ಸ್ಥಾಪಿಸಿದ್ದಾರೆ ಎಂದು ಹೇಳಿದರು.

ಬಡತನ ನಿರ್ಮೂಲನೆ, ಪ್ರತಿಯೊಬ್ಬರಿಗೂ ಸೂರು, ನೀರು, ಉತ್ತಮ ಆಹಾರ, ರೈತರ ಆದಾಯ ದ್ವಿಗುಣಗೊಳಿಸುವುದು ಹೀಗೆ ನಾನಾ ಯೋಜನೆ ರೂಪಿಸಿಕೊಂಡು, ಪ್ರಧಾನಿ ಮೋದಿ ದೇಶವನ್ನು ಮುನ್ನಡೆಸುತ್ತಿದ್ದಾರೆ. ಇನ್ನೂ ೧೫ ವರ್ಷ ಕಾಲ ನರೇಂದ್ರ ಮೋದಿ ಪ್ರಧಾನಿಯಾಗಿದ್ದರೆ ಜಾಗತಿಕ ಮಟ್ಟದಲ್ಲಿ ಭಾರತ ನಂಬರ್ ಒನ್ ರಾಷ್ಟ್ರವಾಗಲಿದೆ ಎಂದು ಹೇಳಿದರು.ಮೇಯರ್ ಎಸ್.ಟಿ.ವೀರೇಶ, ಜಿಲ್ಲಾಧಿಕಾರಿ ಮಹಾಂತೇಶ ಜಿ.ಬೀಳಗಿ, ಜಿಪಂ ಸಿಇಓ ಡಾ.ವಿಜಯ ಮಹಾಂತೇಶ ದಾನಮ್ಮನವರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಾಗರಾಜ, ಜಿಲ್ಲಾಸ್ಪತ್ರೆ ಸರ್ಜನ್ ಡಾ.ಜಯಪ್ರಕಾಶ, ತಜ್ಞ ವೈದ್ಯರಾದ ಡಾ.ರವಿಕುಮಾರ, ಜಿಲ್ಲಾಸ್ಪತ್ರೆ ಶುಶ್ರೂಷಕ ಅಧೀಕ್ಷಕಿ ಶಕುಂತಲಾ ಕಾಂಬ್ಳೆ, ಪಾಲಿಕೆ ಸದಸ್ಯ ಪ್ರಸನ್ನಕುಮಾರ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!