ಪರ್ಸಂಟೇಜ್ ಆರೋಪದ ಬೆನ್ನಲೇ ಬೊಮ್ಮಾಯಿ ಸರ್ಕಾರಕ್ಕೆ ‘ಪೇಪರ್‌ಲೆಸ್’ ಹೊಡೆತ; ಹೈಕೋರ್ಟ್‌ನಿಂದ ನೋಟಿಸ್

ಬೆಂಗಳೂರು: ಪರ್ಸಂಟೇಜ್ ಆರೋಪ ಸಹಿತ ಸಾಲು ಸಾಲು ಹಗರಣಗಳ ಸುಳಿಯಲ್ಲಿ ಸಿಲುಕಿರುವ ರಾಜ್ಯ ಬಿಜೆಪಿ ಸರ್ಕಾರದ ವಿರುದ್ದದ ‘ಪೇಪರ್‌ಲೆಸ್ ಹಗರಣ’ದ ಬಾಂಬ್ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಹಗರಣ ಕುರಿತಂತೆ ಹಿರಿಯ ವಕೀಲರೂ ಆದ ಕಾಂಗ್ರೆಸ್ ನಾಯಕ ರಮೇಶ್ ಬಾಬು ಅವರು ಹೈಕೋರ್ಟ್ ಮೆಟ್ಟಿಲೇರಿದ್ದು ರಾಜ್ಯ ಸರ್ಕಾರ ಮುಜುಗರದ ಪರಿಸ್ಥಿತಿಯಲ್ಲಿ ಸಿಲುಕಿದೆ.
ದೇಶದ ಸುಧಾರಣಾ ಕ್ರಮಕ್ಕಾಗಿ ಮೋದಿ ಸರ್ಕಾರ ಅನುದಾನ ನೀಡಲು ಮುಂದಾದರೂ ಮೋದಿ ಆಡಳಿತದ ಸೂತ್ರವನ್ನೇ ಕಡೆಗಣಿಸಿ ಪರ್ಯಾಯ ಯೋಜನೆಗೆ ಮುಂದಾಗಿರುವ ರಾಜ್ಯದ ಬಿಜೆಪಿ ಸರ್ಕಾರದ ವಿರುದ್ದ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ಪ್ರದೇಶ ಕಾಂಗ್ರೆಸ್ ಮಾಧ್ಯಮ ವಿಭಾಗದ ಉಪಾಧ್ಯಕ್ಷರೂ ಆದ ಮಾಜಿ ಶಾಸಕ ರಮೇಶ್ ಬಾಬು ಅವರು ಈ ಪಿಐಎಲ್ ಸಲ್ಲಿಸಿದ್ದು, ಈ ಅರ್ಜಿಯನ್ನು ಪರಿಗಣಿಸಿರುವ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದೆ.
ಏನಿದು ಹಗರಣ..?
ಕರ್ನಾಟಕ ವಿಧಾನಮಂಡಲದಲ್ಲಿ 253 ಕೋಟಿ ರೂ. ವೆಚ್ಚದಲ್ಲಿ ಕಾಗದ ರಹಿತ ವ್ಯವಸ್ಥೆ ತರಲು ರಾಜ್ಯ ಸರ್ಕಾರ ಮುಂದಾಗಿದೆ. ಕೇಂದ್ರ ಸರ್ಕಾರದ ಮಹತ್ವದ ಯೋಜನೆಯನ್ನು ಕಡೆಣಿಸಿ, ಕೇಂದ್ರದ ಅನುದಾನವನ್ನೇ ನಿರಾಕರಿಸಿ ಈ ಯೋಜನೆಯನ್ನು ಜಾರಿ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮ ಸರಿಯಲ್ಲ ಎಂದು ರಮೇಶ್ ಬಾಬು ಅವರು ಹೈಕೋರ್ಟ್‌ನ ಗಮನಸೆಳೆದಿದ್ದಾರೆ.
2017-18ರಲ್ಲಿ ಸಿದ್ದರಾಮಯ್ಯ ಸರ್ಕಾರ ಇದ್ದಾಗ ವಿಧಾನಮಂಡಲದಲ್ಲಿ ಕಾಗದರಹಿತ ಯೋಜನೆ ಅಳವಡಿಸಲು 60 ಕೋಟಿ ಅನುದಾನ ಘೋಷಣೆ ಮಾಡಿ 20 ಕೋಟಿ ಬಿಡುಗಡೆ ಮಾಡಿತ್ತು. ನಂತರ ಕೇಂದ್ರ ಸರ್ಕಾರವೇ ‘ಒಂದು ದೇಶ ಒಂದು ವಿಧಾನ’ ಎಂಬ ಯೋಜನೆ ಘೋಷಣೆ ಮಾಡಿ ದೇಶದ ಎಲ್ಲ ವಿಧಾನಮಂಡಲದಲ್ಲಿ ಒಂದೇ ಮಾದರಿ ವ್ಯವಸ್ಥೆ ಜಾರಿಗೆ ಮುಂದಾಗಿತ್ತು. ಇದಕ್ಕಾಗಿ ತಗಲುವ ವೆಚ್ಚದಲ್ಲಿ ಕೇಂದ್ರ ಸರ್ಕಾರ ಶೇ.60ರಷ್ಟು ಅನುದಾನ ನೀಡಿ, ಇದರ ವಾರ್ಷಿಕ ನಿರ್ವಹಣೆಯನ್ನು 5 ವರ್ಷ ಕೇಂದ್ರವೇ ಮಾಡಲಿದೆ ಎಂದು ಹೇಳಿತ್ತು. ಅಂದಿನ ಮುಖ್ಯಕಾರ್ಯದರ್ಶಿ ವಿಜಯ್ ಭಾಸ್ಕರ್ ಅವರ ಅಧ್ಯಕ್ಷತೆಯಲ್ಲಿ ಸಭೆಯೂ ನಡೆದಿತ್ತು ಎಂಬುದು ರಮೇಶ್ ಬಾಬು ಅವರು ಒದಗಿಸಿರುವ ಮಾಹಿತಿ.
ರಾಜ್ಯದಲ್ಲಿ ಇ ವಿಧಾನ್ ಜಾರಿ ಆದರೆ, ಇವರಿಗೆ ಕಮಿಷನ್ ಸಿಗುವುದಿಲ್ಲ ಎಂದು ಕೇಂದ್ರದ ಯೋಜನೆಯನ್ನು ಪಡೆಯದೇ, ಅದಕ್ಕೆ ಪರ್ಯಾಯವಾಗಿ, ಯೋಜನೆ ಗಾತ್ರವನ್ನು 253 ಕೋಟಿಗೆ ಏರಿಸಿ, ಕಿಯೋನಿಕ್ಸ್ ಜತೆ ಒಪ್ಪಂದ ಮಾಡಿಕೊಂಡು, ರಾಜ್ಯ ಸರ್ಕಾರದ ಹಣದಲ್ಲೇ ಯೋಜನೆ ಮಾಡುವ ಸಂಬಂಧ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ರಮೇಶ್ ಬಾಬು ಆರೋಪಿಸಿದ್ದಾರೆ
ರಾಜ್ಯ ಸರ್ಕಾರದ ಈ ನಡೆಯನ್ನು ಆಕ್ಷೇಪಿಸಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದರೂ ಸರ್ಕಾರ ಕ್ಯಾರೇ ಅನ್ನಲಿಲ್ಲ. ಈ ಕ್ರಮ ಸರಿಯಲ್ಲ ಎಂದು ತಾವು ಅನೇಕ ಬಾರಿ ಸರ್ಕಾರ ಹಾಗೂ ಸ್ಪೀಕರ್ ಕಚೇರಿಗೆ ದೂರು ಸಲ್ಲಿಸಿದರೂ ಪ್ತಯೋಜನವಾಗಿಲ್ಲ. ಸಭಾಧ್ಯಕ್ಷರ , ಕಚೇರಿ ಅಧಿಕಾರಿಗಳ ಭೇಟಿಗೆ ಅವಕಾಶ ಕೂಡಾ ಸಿಗಲಿಲ್ಲ. ಈ ಬಗ್ಗೆ ಪ್ರಧಾನಿಯವರಿಗೆ ದೂರು ಸಲ್ಲಿಸಿದರೂ ಯಾವುದೇ ಉತ್ತರ ಬರಲಿಲ್ಲ. ಹಾಗಾಗಿ ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಧಾವೆ ಹೂಡಿರುವುದಾಗಿ ರಮೇಶ್ ಬಾಬು ವಿವರಿಸಿದ್ದಾರೆ.
ಈ ಯೋಜನೆಯನ್ನು ರಾಜ್ಯ ಸರ್ಕಾರ ಮಾಡಿದರೆ ಸಾರ್ವಜನಿಕರ ಹಣ ಪೋಲಾಗುತ್ತದೆ. ಸಾರ್ವಜನಿಕ ಹಿತದೃಷ್ಟಿಯಿಂದ ಇದನ್ನು ತಡೆಹಿಡಿಯಬೇಕಿದೆ. ಆದರೂ ಕೆಲವು ಅಧಿಕಾರಿಗಳು ಹಣಕಾಸು ಸಚಿವಾಲಯ, ಮುಖ್ಯಮಂತ್ರಿ ಕಚೇರಿ ಮೇಲೆ ಒತ್ತಡ ಹೇರಿ 253 ಕೋಟಿ ಹಣ ಬಿಡುಗಡೆಗೆ ಪ್ರಯತ್ನಿಸಿದ್ದಾರೆ ಎಂದು ರಮೇಶ್ ಬಾಬು ಅವರು ಹಗರಣದ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಕೇಂದ್ರ ಸರ್ಕಾರವು ಇಡೀ ದೇಶಕ್ಕೆ ಅನ್ವಯವಾಗುವಂತೆ ಕಾರ್ಯಕ್ರಮ ರೂಪಿಸಿದ್ದರೆ, ಅವರದ್ದೇ ಪಕ್ಷದ ರಾಜ್ಯ ಸರ್ಕಾರ ಕೇಂದ್ರದ ಯೋಜನೆಯನ್ನು ಬದಿಗಿಟ್ಟು ಹಣ ಪೋಳಾಗುವ ಪರ್ಯಾಯ ಯೋಜನೆ ಕೈಗೊಳ್ಳಬಾರದು. ಈ ಸಂಬಂಧ ಸೂಕ್ತ ನಿರ್ದೇಶನ ನೀಡಬೇಕೆಂದು ರಮೇಶ್ ಬಾಬು ಅವರು ಈ ಪಿಐಎಲ್‌ನಲ್ಲಿ ಕೋರಿದ್ದಾರೆ. ಈ ಸಂಭಂಧ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟೀಸ್ ನೀಡಿದೆ..