ಕಚ್ಚಾತೈಲ ದರದಲ್ಲಿ ಇಳಿಕೆ : ಪೆಟ್ರೋಲ್-ಡೀಸೆಲ್ ದಿಢೀರ್ ಏರಿಕೆ ಸಾಧ್ಯತೆ ಕಡಿಮೆ!
ನವದೆಹಲಿ: ಪಂಚರಾಜ್ಯ ಚುನಾವಣೆ ಫಲಿತಾಂಶದ ಬಳಿಕ ಪೆಟ್ರೋಲಿಯಂ ಉತ್ಪನ್ನಗಳ ದರದಲ್ಲಿ ಕನಿಷ್ಠ 15 ರೂಪಾಯಿ ಏರಿಕೆ ನಿರೀಕ್ಷಿಸಲಾಗಿತ್ತು. ಆದರೆ, ಕಚ್ಚಾ ತೈಲ ದರ 130 ಡಾಲರ್‌ನಿಂದ ಮತ್ತೆ 100 ಡಾಲರ್ ಮಟ್ಟಕ್ಕೆ ಬಂದಿದೆ. ಜಾಗತಿಕ ಮಟ್ಟದಲ್ಲಿ ಬ್ರೆಂಟ್ ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್‌ಗೆ 98 ಡಾಲರ್ ಆಸುಪಾಸಿನಲ್ಲಿದೆ. ಕಚ್ಚಾತೈಲ ಬೆಲೆ ಇಳಿಕೆಯು ಚಿಲ್ಲರೆ ಇಂಧನ ಮಾರಾಟಗಾರರ ನೋವನ್ನು ಕಡಿಮೆ ಮಾಡಲಿದೆ. ಮಾರ್ಚ್ 7ರಂದು ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್‌ಗೆ 139 ಡಾಲರ್ ತಲುಪಿದಾಗ 20 ರೂಪಾಯಿ ಹೊರೆ ಚಿಲ್ಲರೆ ಮಾರಾಟಗಾರರ ಮೇಲೆ ಬಿದ್ದಿತ್ತು. ಸೋಮವಾರ ಕಚ್ಚಾ ತೈಲ ದರ 128.24 ಡಾಲರ್‌ನಿಂದ 110.3 ಡಾಲರ್‌ಗೆ ಕುಸಿದ ಕಾರಣ ಪೇಟೆ ಕೊಂಚ ನಿರಾಳವಾಗಿತ್ತು. ಸಾಮಾನ್ಯವಾಗಿ, ಅತ್ಯಂತ ಸಂಕಷ್ಟದ ಸನ್ನಿವೇಶದಲ್ಲಿ ಬ್ರೆಂಟ್ ತೈಲದ ಬೆಲೆ ಏರಿಕೆ ಪ್ರತಿ ಬ್ಯಾರೆಲ್ ಮೇಲೆ 2 ರಿಂದ 5 ಡಾಲರ್ ಆಸುಪಾಸಿನಲ್ಲಿರುತ್ತದೆ. ಆದರೆ, ಈ ಸಲ ಇದನ್ನು ಮೀರಿ ದರ ಏರಿಕೆ ಆಗಿತ್ತು. ಇನ್ನೊಂದು ಸುತ್ತಿನ ತೆರಿಗೆ ಕಡಿತಕ್ಕೆ ಒತ್ತಡವೂ ಸರ್ಕಾರದ ಮೇಲೆ ಹೆಚ್ಚಾಗಿತ್ತು. ಇದು ಮುಂದಿನ ವರ್ಷದ ಹಣಕಾಸು ವರ್ಷದ ಮೇಲೆ ಪರಿಣಾಮ ಬೀರುವಂಥ ವಿಚಾರವಾಗಿತ್ತು. ಪ್ರತಿ ಬ್ಯಾರೆಲ್ ಕಚ್ಚಾ ತೈಲ ದರ ಮಂಗಳವಾರ 100 ಡಾಲರ್ ಒಳಗೆ ಬಂದಿದೆ. ಹೀಗಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ನಿರೀಕ್ಷಿತ ಮಟ್ಟದಲ್ಲಿ ಆಗಲ್ಲ. ಆದಾಗ್ಯೂ, ಬೆಲೆ ಏರಿಕೆ ಅನಿವಾರ್ಯವಾಗಿದ್ದು, ಅದರ ಪ್ರಮಾಣ ಮತ್ತು ದರ ಏರಿಕೆಯ ದಿನಾಂಕ ಇನ್ನೂ ನಿಗದಿಯಾಗಿಲ್ಲ ಎಂದು ಸರ್ಕಾರದ ಮೂಲಗಳು ತಿಳಿಸಿವೆ.