ಮಣಿಪುರದ ಘಟನೆಗೆ ಪ್ರಧಾನ ಮಂತ್ರಿಗಳು ಮತ್ತು ಗೃಹ ಮಂತ್ರಿಗಳು ರಾಜೀನಾಮೆ ನೀಡಬೇಕು : ಅನೀಸ್ ಪಾಷ
ದಾವಣಗೆರೆ : ಭಾರತದಂತಹ ಪ್ರಜಾ ಪ್ರಭುತ್ವ ದೇಶದಲ್ಲಿ ಪ್ರಜೆಗಳ ಅದರಲ್ಲೂ ಮಹಿಳೆಯರ ರಕ್ಷಣೆಯು ಸರ್ಕಾರದ ಮೇಲಿದೆ. ಇತ್ತೀಚೆಗೆ ಸುಮಾರು ೭೯ ದಿನಗಳಿಂದ ಮಣಿಪುರದಲ್ಲಿ ಜನಾಂಗೀಯ ಗಲಭೆಗಳು ನಡೆಯುತ್ತಿದ್ದು, ೧೫೦ ಕ್ಕೂ ಹೆಚ್ಚು ಜನ ಬಲಿಯಾಗಿದೆ. ೪೦ ಸಾವಿರ ಜನ ನಿರಾಶ್ರಿತರಾಗಿದ್ದಾರೆ ಹಾಗೂ ಕೊಟ್ಯಾಂತರ ನಷ್ಟವಾಗಿದೆ. ಜನಾಂಗೀಯ ಗಲಭೆಯಿಂದ ಮಣಿಪುರ ಹೊತ್ತಿ ಉರಿಯುತ್ತಿದೆ.
ಮೇ ೧೮ ರಂದು ಇಬ್ಬರು ಮಹಿಳೆಯರನ್ನು ಬೆತ್ತಲುಗೊಳಿಸಿ ಮೆರವಣಿಗೆ ಮಾಡಿ ಹೊಲಕ್ಕೆ ಕರೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರ ಮಾಡಲಾಗಿದೆ. ಎಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯ ಇಡೀ ಪ್ರಪಂಚದ ಮುಂದೆ ನಮ್ಮ ದೇಶ ತಲೆ ತಗ್ಗಿಸುವಂತಹದ್ದಾಗಿದೆ. ಈ ಘಟನೆಯು ಪೊಲೀಸ್ ಠಾಣೆಯ ಕೇವಲ ೨ ಕಿ.ಮೀ. ದೂರದಲ್ಲಿ ನಡೆದಿರುತ್ತದೆ. ಇಂತಹ ನೀಚ ಮತ್ತು ಹ್ಯೇಯ ಕೃತ ದಾಖಲಾಗಿ ೨ ತಿಂಗಳು ಕಳೆದ ಮೇಲೆ ಆ ಕೃತ್ಯದ ವಿಡೀಯೋ ವೈರಲ್ ಆಗಿ, ಸರ್ವೋಚ್ಛ ನ್ಯಾಯಾಲಯವು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿ ಚಾಟಿ ಬೀಸಿದ ನಂತರ ಎಚ್ಚೆತ್ತುಕೊಂಡು ಆ ಕೃತ್ಯದ ಬಗ್ಗೆ ಮೊದಲ ಬಾರಿಗೆ ಮಾನ್ಯ ಪ್ರಧಾನ ಮಂತ್ರಿಗಳು ಪತ್ರಕರ್ತರ ಮುಂದೆ ಹಾಜರಾಗಿ ಸಣ್ಣ ಹೇಳಿಕೆಯನ್ನು ನೀಡಿ ಜನ ಸಾಮಾನ್ಯರು ಆಕ್ರೋಶಗೊಳ್ಳದಂತೆ ಕಣ್ಣೊರೆಸುವ ಕೆಲಸ ಮಾಡಿದ್ದಾರೆ.
ಇದು ಖಂಡನೀಯ. ಈ ವರ್ತನೆಯಿಂದ ಇಡೀ ದೇಶದ ಮಹಿಳೆಯರು ಆತ್ಮ ಸ್ಥೈರ್ಯವನ್ನು ಕಳೆದುಕೊಂಡಿದ್ದಾರೆ. ದಂಗೆಗಳು ಪ್ರಾರಂಭವಾಗಿ ೭೯ ದಿನಗಳು ಕಳೆದರೂ ದಂಗೆಯನ್ನು ನಿಯಂತ್ರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿವೆ. ಮಾನ್ಯ ಪ್ರಧಾನ ಮಂತ್ರಿಗಳು ತಮ್ಮ ಪ್ರಜೆಗಳಿಗೆ ರಕ್ಷಣೆಯನ್ನು ನೀಡಲು ಕ್ರಮ ತೆಗೆದುಕೊಳ್ಳುವ ಬದಲಿಗೆ ನಿನ್ನೆಯವರೆಗೆ ಚಕಾರವೆತ್ತದೆ ಚುನಾವಣಾ ಪ್ರಚಾರದ ಪ್ರವಾಸದಲ್ಲಿ ನಿರತರಾಗಿರುವುದರಿಂದಲೇ ದುಷ್ಕೃತ್ಯಗಳು ಹೆಚ್ಚಾಗಲು ಕಾರಣವಾಯಿತು.
ಕೇಂದ್ರ ಸರ್ಕಾರಕ್ಕೆ ದೇಶದ ಜನತೆಯ ನೆಮ್ಮದಿ ಬದುಕಿಗಿಂತ ಚುನಾವಣೆಯೇ ತುಂಬಾ ಪ್ರಾಮುಖ್ಯವಾಗಿದೆ ಎಂದು ಅನಿಸುತ್ತದೆ. ಒಂದುವೇಳೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನಾಂಗೀಯ ಗಲಭೆಗಳನ್ನು ಗಂಭೀರವಾಗಿ ಪರಿಗಣಿಸಿ ತೀವ್ರ ಕ್ರಮ ಕೈಗೊಂಡಿದ್ದರೆ, ಇಷ್ಟೊಂದು ದೊಡ್ಡ ಅನಾಹುತಗಳು ನಡೆಯುತ್ತಿರಲಿಲ್ಲ ಮತ್ತು ಇಡೀ ಪ್ರಪಂಚದ ಮುಂದೆ ನಾವು ತಲೆತಗ್ಗಿಸುವಂತಹ ಪ್ರಸಂಗ ಉದ್ಭವವಾಗುತ್ತಿರಲಿಲ್ಲ. ಹಾಗಾಗಿ ಮಣಿಪುರದಲ್ಲಿ ನಡೆದಿರುವ ಜನಾಂಗೀಯ ಗಲಭೆಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮನಾಗಿ ನೇರ ಹೊಣೆಯಾಗಿವೆ.
ಹಾಗಾಗಿ ತಾವು ಮಾಡಿರುವ ನಿರ್ಲಕ್ಷತನ ಮತ್ತು ತಪ್ಪಿಗೆ ನೈತಿಕ ಹೊಣೆಹೊತ್ತು ತಕ್ಷಣ ರಾಜಿನಾಮೆ ನೀಡಬೇಕು ಎಂದು ಪೀಪಲ್ಸ್ ಲಾಯರ್ಸ್ ಗಿಲ್ಡ್ ಒತ್ತಾಯಿಸುತ್ತದೆ. ತಪ್ಪಿದ್ದಲ್ಲಿ ಇಡೀ ರಾಜ್ಯಾದ್ಯಂತ ಗಿಲ್ಡ್ ಇತರೆ ಸಂಘಟನೆಗಳೊಂದಿಗೆ ಸೇರಿ ಕಾನೂನಾತ್ಮಕವಾಗಿ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು “ ಪೀಪಲ್ಸ್ ಲಾಯರ್ಸ್ ಗಿಲ್ಡ್ ” ನ ರಾಜ್ಯ ಸಂಚಾಲಕರಾದ ಅನೀಸ್ ಪಾಷರವರು ಒತ್ತಯಿಸಿದ್ದಾರೆ.