ಹೈಟೆಕ್ ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರ ದಾಳಿ ನಾಲ್ವರ ಬಂಧನ

ಕೋಲಾರ: ಹೈಟೆಕ್ ವೇಶ್ಯಾವಾಟಿಕೆ ಅಡ್ಡೆ ಮೇಲೆ ಭಾನುವಾರ ಮಧ್ಯರಾತ್ರಿ ಪೊಲೀಸರು ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ. ಮೂವರು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಶೋಧ ಕಾರ್ಯ ನಡೆಸಿದ್ದಾರೆ.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಕರ್ನಾಟಕ–ಆಂಧ್ರ ಗಡಿ ಭಾಗದ ರಾಕ್ ವ್ಯಾಲಿ ರೆಸಾರ್ಟ್‌ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿತ್ತು. ಕಾರ್ಯಾಚರಣೆಯಲ್ಲಿ ಆರು ಮಹಿಳೆಯನ್ನು ರಕ್ಷಿಸಲಾಗಿದೆ. ಈ ಮಹಿಳೆಯರನ್ನು ಹೈದರಾಬಾದ್ ಮೂಲದ ವಿಜಯ್ ಎಂಬಾತ ಆಂಧ್ರದ ವಿವಿಧೆಡೆಯಿಂದ ಕರೆತಂದು ರೆಸ್ಟೋರೆಂಟ್ ಮಾಲೀಕರೊಂದಿಗೆ ಸೇರಿ ವೇಶ್ಯಾವಾಟಿಕೆ ನಡೆಸುತ್ತಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರಂಭದಲ್ಲಿ 14 ಜನರನ್ನು ವಶಕ್ಕೆ ಪಡೆದು ತನಿಖೆಗೊಳಪಡಿಸಿದೆವು. ರೆಸ್ಟೋರೆಂಟ್ ಮಾಲೀಕ, ಮ್ಯಾನೇಜರ್, ಸಪ್ಲೈಯರ್, ರಿಸೆಪ್ಷನಿಸ್ಟ್ ಹಾಗೂ ಮಹಿಳೆಯರನ್ನು ಕರೆತಂದಿದ್ದ ಏಜೆಂಟ್ ಸೇರಿದಂತೆ 7 ಮಂದಿ ವಿರುದ್ಧ ಕೋಲಾರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಏಜೆಂಟ್ ವಿಜಯ್, ಮಂಜುನಾಥ್, ಆಂಜಪ್ಪ, ಸತೀಶ್ ಎಂಬುವರನ್ನು ಬಂಧಿಸಿದ್ದು, ರೆಸ್ಟೋರೆಂಟ್ ಮಾಲೀಕ ಚಂದ್ರಹಾಸ ಸೇರಿದಂತೆ ಮೂವರು ತಲೆಮರೆಸಿಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯ ವಶಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ