Police Transfer: ಪೊಲೀಸ್ ವರ್ಗಾವಣೆ ದಂಧೆ ಪ್ರಶ್ನೆ ಕೇಳಿದ್ದಕ್ಕೆ ಸಂವಾದನೇ ರದ್ದು || ಮುಖ್ಯಮಂತ್ರಿ ಮುಖ ಕೆಂಪಾಗಿದ್ದು ಯಾಕೆ.?
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೌಮ್ಯ ಸ್ವಭಾವದ ವ್ಯಕ್ತಿತ್ವ ಅವರದ್ದು, ಎಲ್ಲರ ಅಭಿಪ್ರಾಯ. ಮಾಧ್ಯಮದವರ ಜೊತೆ ಸಾಕಷ್ಟು ಸೌಜನ್ಯದಿಂದಲೇ ಹರಟುವ ಮುಖ್ಯಮಂತ್ರಿಗಳು ನಿನ್ನೆ ಬೆಂಗಳೂರಿನ ಸುದ್ದಿಗೋಷ್ಟಿಯಲ್ಲಿ ಪತ್ರಕರ್ತರ ವಿರುದ್ದ ಮುಖ ಕೆಂಪು ಮಾಡಿಕೊಂಡ ಸುದ್ದಿಗೋಷ್ಟಿಯನ್ನೇ ರದ್ದು ಮಾಡಿದ ಘಟನೆ ನಡೆದಿದೆ.
ಹಿರಿಯ ಪೊಲೀಸ್ ಅಧಿಕಾರಿಗಳ ಸಮಾವೇಶದಲ್ಲಿ ಪೊಲೀಸ್ ಇಲಾಖೆಯ ವಿವಿಧ ಅಭಿವೃದ್ದಿ ಯೋಜನೆಗಳಿಗೆ ಚಾಲನೆ ನೀಡಿ, ಸುದ್ದಿಗಾರ ಜೊತೆ ಮಾತನಾಡಿದರು. ಅಪರಾಧ ವರದಿಗಾರರ ಜೊತೆ ಒಂದು ಗಂಟೆಯ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕ್ರೈಂ ರಿಪೋರ್ಟರ್ ಗಳಿಗೆ ಮುಖ್ಯಮಂತ್ರಿ ಮತ್ತು ಗೃಹ ಮಂತ್ರಿಗಳ ಸಂವಾದ ಸಿಗುವುದು ಅಪರೂಪ. ಹೀಗಾಗಿ ಎಲ್ಲಾ ಪತ್ರಕರ್ತರು ಮುಖ್ಯಮಂತ್ರಿ ಮತ್ತು ಗೃಹಮಂತ್ರಿಗಳಿಗೆ, ಪೊಲೀಸ್ ವ್ಯವಸ್ಥೆಯ ಸುಧಾರಣೆ ಬಗ್ಗೆ ಪ್ರಶ್ನೆ ಕೇಳಲು ಉತ್ಸುಕರಾಗಿದ್ದರು. ಆದ್ರೆ, ಸುದ್ದಿಗೋಷ್ಟಿಯ ಆರಂಭದಲ್ಲಿ, ಮುಖ್ಯಮಂತ್ರಿಗಳಿಗೆ, ಪೊಲೀಸ್ ಇಲಾಖೆಯಲ್ಲಿ ಬೇರೂರಿರುವ ಪೊಲೀಸ್ ಅಧಿಕಾರಿಗಳ ವರ್ಗಾವಣೆ ದಂಧೆಯ ಬಗ್ಗೆ ಪ್ರಶ್ನೆ ಕೇಳಲು ಮುಗಿಬಿದ್ದರು.
” ನೀವೆನೋ ಪೊಲೀಸ್ ಅಧಿಕಾರಿಗಳಿಗೆ ದಕ್ಷ ಮತ್ತು ಜನಪರ ಸೇವೆ ನೀಡಿ ಅಂತೀರಾ..? ಆದ್ರೆ, ಒಬ್ಬೊಬ್ಬ ಪೊಲೀಸ್ ಅಧಿಕಾರಿ, 30-40 ಲಕ್ಷ ರೂಪಾಯಿ ಹಣ ಕೊಟ್ಟು ಪೊಸ್ಟಿಂಗ್ ತಗೆದುಕೊಳ್ಳುತ್ತಾರೆ, ಇಂಥಾ ಅಧಿಕಾರಿಗಳಿಂದ ಇನ್ಯಾವ, ದಕ್ಷತೆ ಪ್ರಾಮಾಣಿಕತೆ ನಿರೀಕ್ಷಿಸಬಹುದು ಹೇಳಿ..? ಎಂದರು. ಜೊತೆಗೆ, ಪೊಲೀಸ್ ವರ್ಗಾವಣೆ ದಂಧೆ ಯಾವ ರೀತಿ ನಡೆಯುತ್ತಿದೆ ಅನ್ನುವುದು ನಿಮಗೆ ಅರಿವು ಇದೆ ಹಾಗೂ ಅನುಭವವೂ ಇದೆ ಎಂದಾಗ ಮುಖ್ಯಮಂತ್ರಿಗಳು ಕೆಂಡಾ ಮಂಡಲವಾದರು.”
ಒಂದು ಕ್ಷಣ ಮೌನವಹಿಸಿ ಅದ್ಯಾವುದಕ್ಕೂ ನಾನು ಉತ್ತರ ಕೊಡಲ್ಲ ಅಂತಾ ಪತ್ರಿಕಾ ಗೋಷ್ಟಿಯಿಂದ ಹೊರನಡೆದರು. ಒಂದು ಗಂಟೆಯ ಸಂವಾದ ಕಾರ್ಯಕ್ರಮ ಐದೇ ನಿಮಿಷಕ್ಕೆ ಕತ್ತರಿ ಬಿತ್ತು. ಮುಖ್ಯಮಂತ್ರಿಗಳ ಈ ನಡೆ ಕಂಡು ಹಿರಿಯ ಅಧಿಕಾರಿಗಳು ಅವಕ್ಕಾದರು. ಮುಖ್ಯಮಂತ್ರಿಗಳ ಬೆನ್ನಲ್ಲೆ ಗೃಹಮಂತ್ರಿ ಆರಗ ಜ್ನಾನೇಂದ್ರ ಅವರು ಕೂಡಾ ಯಾವುದೇ ಸಂವಾದ ನಡೆಸದೇ ಪತ್ರಕರ್ತರಿಂದ ತಪ್ಪಿಸಿಕೊಳ್ಳಲು ಮುಂದಾದರು.
ಬೆಂಗಳೂರಿನ ಡಿಜಿ ಐಜಿ ಕಚೇರಿಯಲ್ಲಿ ನಡೆದ ಈ ಘಟನೆ ಇದೀಗ ವೈರಲ್ ಆಗುತ್ತಿದ್ದು, ಪತ್ರಕರ್ತರ ಪ್ರಶ್ನೆಗೆ ಉತ್ತರ ಕೊಡದೇ ಪಲಾಯನ ಮಾಡಿದ್ದು ಯಾಕೆ ..? ಎನ್ನುವ ಚರ್ಚೆ ಪೊಲೀಸ್ ವಲಯಲ್ಲಿಯೇ ಚರ್ಚೆಗೆ ಗ್ರಾಸವಾಗಿದೆ.