ದಾವಣಗೆರೆ: ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಫರ್ಧಿಸಿರುವ ಶಿವಪ್ರಕಾಶ್ ಪರ ಅವರ ಬೆಂಬಲಿಗರು ಮಾಯಕೊಂಡ ಕ್ಷೇತ್ರದ ಆನಗೋಡು ಗ್ರಾಮದಲ್ಲಿ ಭರ್ಜರಿ ಪ್ರಚಾರ ನಡೆಸಿದರು.
ಈಗಾಗಲೇ ಕಾಂಗ್ರೆಸ್‌ನಿಂದ ಸವಿತಾಬಾಯಿ ಬಂಡಾಯ ಎದ್ದಿದ್ದು, ಈಗ ಬಿಜೆಪಿಯಲ್ಲಿ ಬಂಡಾಯದ ಕಾವು ಎದ್ದಿದೆ.. ವಿಪರ್ಯಾಸಯೆಂದರೆ ಬಂಡಾಯ ಎದ್ದವರೆಲ್ಲ ಲಂಬಾಣಿ ಸಮುದಾಯದವರೇ. ಕಾಂಗ್ರೆಸ್ ನಾಲ್ಕು ಕ್ಷೇತ್ರಗಳಿಗೆ ಹೊರತು ಪಡಿಸಿದರೆ ಉಳಿದೆಲ್ಲಾ ಪಕ್ಷಗಳು ಟಿಕೆಟ್ ಘೋಷಿಸಿವೆ. ಬಂಡಾಯದ ಧನಿ ಮೊಳಗಿಸಿ ಪಕ್ಷ ಬಿಟ್ಟು ಹೊರ ಹೋದವರಿಗಿಂತ ಪಕ್ಷದಲ್ಲಿಯೇ ಇರುವ ಟಿಕೆಟ್ ವಂಚಿತರ ಅಸಮಾಧಾನವನ್ನು ಎದುರಿಸುವುದು ಪಕ್ಷಗಳಿಗೆ ತಲೆ ನೋವಾಗಿದೆ. ಪ್ರಮುಖ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್‌ನ ಎರಡೂ ಪಕ್ಷದಲ್ಲೂ ಇದೇ ವಾತಾವರಣ ಕಂಡು ಬರುತ್ತಿದೆ. ಈ ಕಾರಣಕ್ಕಾಗಿಯೇ ಪಕ್ಷಗಳು ಅಭ್ಯರ್ಥಿ ಘೋಷಿಸುವುದು ತಡವಾಯಿತು. ಕಾಂಗ್ರೆಸ್ ಹರಿಹರ ಕ್ಷೇತ್ರಕ್ಕೆ ಇನ್ನೂ ಟಿಕೆಟ್ ಘೋಷಣೆ ಮಾಡಿಲ್ಲ, ಏನೇ ಆದರೂ ಈ ಬಾರಿ ಒಳ ಬಂಡಾಯದ ಪರಿಸ್ಥಿತಿಯಲ್ಲಿ ಏನೂ ಬದಲಾವಣೆ ಆಗಲ್ಲ ಎಂಬುದು ರಾಜಕೀಯ ವಿಶ್ಲೇಷಣೆ. ಇನ್ನೂ ಬೇಡ ಜಂಗಮ ಜಾತಿ ಪ್ರಮಾಣ ಪತ್ರ ಪಡೆಯಲು ವಾಗೀಶ್ ಸ್ವಾಮಿ ಬಿಜೆಪಿಯಿಂದ ಬಂಡಾಯ ಎದ್ದಿದ್ದು, ಪಕ್ಷೇತರರಾಗಿ ಸ್ಪರ್ಧಿಸುವ ಇರಾದೆ ಹೊಂದಿದ್ದಾರೆ. ಇವರು ನಿಂತರೇ ಬಿಜೆಪಿ ಮತಗಳು ವಿಭಾಗವಾಗಲಿದ್ದು, ಇತರರಿಗೆ ಆಗಲಿದೆ.
ಅಸಮಾಧಾನ : ದಾವಣಗೆರೆ ತಾಲೂಕಿನ ಮಾಯಕೊಂಡ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಆಗಿ ಘೋಷಣೆಯಾಗಿರುವ ಬಸವರಾಜ್ ನಾಯ್ಕ್ ಹೆಸರು ಘೋಷಣೆಯಾದ ಹಿನ್ನೆಲೆ ಮಾಯಕೊಂಡ ಕ್ಷೇತ್ರದ ಬಿಜೆಪಿಯ 11 ಜನ ಆಕಾಂಕ್ಷಿಗಳ ಪಕ್ಷದ ವಿರುದ್ಧ ಅಸಮಾಧಾನಗೊಂಡು ಬಂಡಾಯ ಎದ್ದಿದ್ದಾರೆ. 11 ಜನ ಆಕಾಂಕ್ಷಿಗಳ ಸಭೆ ನಡೆಸಿ ಸಭೆಯಲ್ಲಿ ತೀರ್ಮಾನಿಸಿ ತಮ್ಮಲ್ಲಿರುವ ಓರ್ವ ಆಕಾಂಕ್ಷಿಯಾಗಿರುವ ದಾವಣಗೆರೆ ನಗರ ಪಾಲಿಕೆ ಸದಸ್ಯ ಹಾಗೂ ಆರ್‌ಎಲ್ ಶಿವಪ್ರಕಾಶ್ ಅವರನ್ನು ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆಗೆ ಇಳಿಸಿದ್ದಾರೆ. ಗ್ರಾಮದ ಮನೆ ಮನೆಗಳು ಹಾಗೂ ವ್ಯಾಪಾರಸ್ಥರು, ಸಾರ್ವಜನಿಕರ ಬಳಿ ತೆರಳಿ ಬಿಜೆಪಿ ಬಂಡಾಯ ಅಭ್ಯರ್ಥಿಗೆ ಮತ ಹಾಕುವಂತೆ ಮನವಿ ಮಾಡಿದರು. ನಾವು ಬಿಜೆಪಿ ಅಭ್ಯರ್ಥಿ ವಿರುದ್ಧ ಬಂಡಾಯವೆದಿದ್ದು, ಬಿಜೆಪಿ ಅಭ್ಯರ್ಥಿ ಬದಲಿಗೆ ನಮ್ಮ ಅಭ್ಯರ್ಥಿಗೆ ಮತ ನೀಡಬೇಕೆಂದು ಜನರ ಬಳಿ ಮತಯಾಚನೆ ಮಾಡಿದರು. ಇದೇ ವೇಳೆ ಅಭ್ಯರ್ಥಿ ಶಿವಪ್ರಕಾಶ್ ಹಿರಿಯರ ಕಾಲಿಗೆ ಬಿದ್ದು ಆರ್ಶೀವಾದ ಪಡೆದು ಮತಯಾಚಿಸಿದ್ದು ಗಮನ ಸೆಳೆಯಿತು. ಮುಖಂಡ ಎಚ್.ಕೆ. ಬಸವರಾಜ್ ಅಧ್ಯಕ್ಷತೆಯಲ್ಲಿ ನಡೆದ ಪ್ರಚಾರದಲ್ಲಿ ಆಲೂರು ನಿಂಗರಾಜ್, ಅನಿಲ್ ಕುಮಾರ್ ನಾಯ್ಕ್ , ಹನುಮ ನಾಯ್ಕ್, ಚಿನ್ನಸಮುದ್ರ ಶೇಖರ್ ನಾಯ್ಕ, ಜಿ.ಮಂಜಾನಾಯ್ಕ, ಎನ್.ಹನುಮಂತ ನಾಯ್ಕ ಇದ್ದರು. ಒಟ್ಟಾರೆ ಕಮಲ, ಕೈ ಪಾಳಯದ ಅಭ್ಯರ್ಥಿಗಳಿಗೆ ಸ್ವ ಪಕ್ಷದವರೇ ಮಗ್ಗಲು ಮುಳ್ಳಾಗಿದ್ದಾರೆ.
