ಪುನೀತ್ ರಾಜ್‌ಕುಮಾರ್‌ಗೆ ಮರಣೋತ್ತರ ಗೌರವ ಡಾಕ್ಟರೇಟ್ ಪ್ರದಾನ

ಮೈಸೂರು: ಕರ್ನಾಟಕ ರತ್ನ, ದಿ. ಪುನೀತ್ ರಾಜ್‌ಕುಮಾರ್‌ಗೆ ಮೈಸೂರು ವಿಶ್ವವಿದ್ಯಾನಿಲಯದ 102ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು. ಮಂಗಳವಾರ ಕ್ರಾಫರ್ಡ್ ಹಾಲ್‌ನಲ್ಲಿ ನಡೆದ 102ನೇ ಘಟಿಕೋತ್ಸವ ಸಮಾರಂಭ ಹಾಗೂ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು. ಮೈಸೂರು ವಿಶ್ವವಿದ್ಯಾನಿಲಯ ಕುಲಪತಿ ಪ್ರೊ.ಜಿ. ಹೇಮಂತ್ ಕುಮಾರ್ ಅವರು ಪುನೀತ್ ರಾಜ್‌ಕುಮಾರ್ ಹೆಸರು ಹೇಳುತ್ತಿದ್ದಂತೆ ಇಡೀ ಸಭಾಂಗಣದಲ್ಲಿ ಚಪ್ಪಾಳೆ ಸದ್ದು ಕೇಳಿ ಬಂತು. ಎಲ್‌ಇಡಿ ಸ್ಕಿನ್‌ನಲ್ಲಿ ಪುನೀತ್ ಬಾಲ್ಯ, ಅವರು ಅಭಿನಯಿಸಿದ ಹಲವು ಚಿತ್ರಗಳ ತುಣುಕು ಪ್ರದರ್ಶಿಸಲಾಯಿತು.

ಪುನೀತ್ ರಾಜ್‌ಕುಮಾರ್ ಪರವಾಗಿ ಪತ್ನಿ ಅಶ್ವಿನಿ ಅವರು ಗೌರವ ಡಾಕ್ಟರೇಟ್ ಸ್ವೀಕರಿಸಿದರು. ಈ ವೇಳೆ ಅವರು ಕೆಲಕಾಲ ಭಾವುಕಗೊಂಡರು. ಈ ಹಿಂದೆ ಪದ್ಮಭೂಷಣ ಡಾ. ರಾಜ್‌ಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು 46 ವರ್ಷಗಳ ಹಿಂದೆ ಮೈಸೂರು ವಿಶ್ವವಿದ್ಯಾನಿಲಯ ನೀಡಿತ್ತು ಎಂಬುದು ಸ್ಮರಣೀಯ. ಹಿರಿಯ ವಿಜ್ಞಾನಿ ಹಾಗೂ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ ವಿಶ್ರಾಂತ ಮಹಾ ನಿರ್ದೇಶಕ ಡಾ.ವಾಸುದೇವ್ ಕಲ್ಕುಂಟೆ ಅತ್ರೆ ಹಾಗೂ ಜಾನಪದ ಗಾಯಕ ಮಳವಳ್ಳಿ ಮಹಾದೇವಸ್ವಾಮಿ ಅವರಿಗೂ ಸಹ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!