ಕಾಂಗ್ರೆಸ್ ಪ್ರಣಾಳಿಕೆಗಾಗಿ ‘ಪ್ರಜಾಧ್ವನಿ’: ಯಾತ್ರೆಯ ಲೋಗೋ ಅನಾವರಣ
ಬೆಂಗಳೂರು: ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ನಿಂದ ‘ಬಿಜೆಪಿಯ ಪಾಪದ ಪುರಾಣ’ ಬಿಡುಗಡೆ, ಪ್ರಣಾಳಿಕೆಗಾಗಿ ಕರ್ನಾಟಕದ ಜನರಿಂದ ಆಕಾಂಕ್ಷೆ, ಸಲಹೆಗಳನ್ನು ಸಂಗ್ರಹಿಸಲು ವೆಬ್ಸೈಟ್ ಆರಂಭಿಸಲಾಗಿದೆ. ಇದೇ ವೇಳೆ ‘ಪ್ರಜಾಧ್ವನಿ’ ಪ್ರಚಾರದ ಲೋಗೋ ಅನಾವರಣ.
ಬಿಜೆಪಿ ಸರ್ಕಾರ ಮತ್ತು ಅದರ ದುರ್ಬಲ ಮುಖ್ಯಮಂತ್ರಿಯ 40% ಕಮಿಷನ್ ದುರಾಸೆ, ಕೋಮು ರಾಜಕೀಯ ಮತ್ತು ಅಸಮರ್ಥ ಆಡಳಿತದಿಂದ ರಾಜ್ಯವನ್ನು ಪಾತಾಳಕ್ಕೆ ನೂಕಿದೆ. ಜನಾದೇಶವನ್ನು ಧಿಕ್ಕರಿಸಿ, ಅನೈತಿಕವಾಗಿ ಮತ್ತು ಅಸಾಂವಿಧಾನಿಕ ರೀತಿಯಲ್ಲಿ “ಆಪರೇಷನ್ ಕಮಲ” ನಡೆಸಿ ಈ ಬಿಜೆಪಿ ಸರ್ಕಾರವನ್ನು ರಚಿಸಲಾಗಿದೆ ಎಂದು ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ.
40% ಕಮಿಷನ್ ಲೂಟಿಗಿಳಿದ ಬಿಜೆಪಿ ಸರ್ಕಾರ 2018ರ ಚುನಾವಣೆಯ ವೇಳೆ ಪ್ರಣಾಳಿಕೆಯಲ್ಲಿ ನೀಡಿದ ಶೇಕಡ 90ಕ್ಕಿಂತ ಹೆಚ್ಚು ಭರವಸೆ ಈಡೇರಿಸದೇ ಕರ್ನಾಟಕದ ಪ್ರಗತಿಯನ್ನು ಕಡೆಗಣಿಸಿದೆ. ಡಬಲ್ ಇಂಜಿನ್ ಬಿಜೆಪಿ ಸರ್ಕಾರದ ನಿರಂತರ ವೈಫಲ್ಯದಿಂದ ದಿನ ಬಳಕೆಯ ವಸ್ತುಗಳ ಬೆಲೆಯು ತೀವ್ರ ಏರಿಕೆಯಾಗಿ ಬಡವರು ಮತ್ತು ಮಧ್ಯಮ ವರ್ಗದ ಜನರು ತೊಂದರೆಗೆ ಸಿಲುಕಿದ್ದಾರೆ. ಕರ್ನಾಟಕದ ರೈತರನ್ನೂ ಸಂಕಷ್ಟಕ್ಕೀಡುಮಾಡಿದ ಬಿಜೆಪಿ, ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಕರ್ನಾಟಕವನ್ನು ದೇಶದಲ್ಲೇ ಎರಡನೇ ಸ್ಥಾನಕ್ಕೆ ತಂದು, ಕುಖ್ಯಾತಿಗೀಡುಮಾಡಿದೆ. 40% ಕಮಿಷನ್ಗೆ ಸರ್ಕಾರ ಮುಗಿಬಿದ್ದಿದ್ದರಿಂದ ಕೋವಿಡ್ ಸಂದರ್ಭದಲ್ಲಿ 3.5 ಲಕ್ಷಕ್ಕೂ ಹೆಚ್ಚು ಕನ್ನಡಿಗರ ಸಾವಿಗೆ ಹಾಗೂ ಅಮಾಯಕ ಗುತ್ತಿಗೆದಾರರ ಆತ್ಮಹತ್ಯೆಗೆ ಕಾರಣವಾಗಿದೆ. ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಜೆಪಿಯ ಹೈಕಮಾಂಡ್ ಕೈಗೊಂಬೆಯಾಗಿ, ಕರ್ನಾಟಕದ ಆಕಾಂಕ್ಷೆಗಳನ್ನು ಹತ್ತಿಕ್ಕಿ ಕನ್ನಡಿಗರ ಧ್ವನಿಯನ್ನು ಸದ್ದಡಗಿಸುತ್ತಿದ್ದಾರೆ. ಬಿಜೆಪಿಯು ಕರ್ನಾಟಕದಲ್ಲಿ ಗಲಭೆ ನಡೆಸಲು, ಜನರ ಜೀವನವನ್ನು ಹಾಳು ಮಾಡಲು ಕಾಂಗ್ರೆಸ್ ಎಂದಿಗೂ ಬಿಡುವುದಿಲ್ಲ. ಕನ್ನಡಿಗರ ಜನಪ್ರತಿನಿಧಿಗಳಾಗಿ, ನಿಮ್ಮ ನೋವನ್ನು ನಾವು ಕಣ್ಣಾರೆ ಕಂಡಿದ್ದೇವೆ ಮತ್ತು ಬಿಜೆಪಿ ಮಾಡಿರುವ ಎಲ್ಲ ಅಪರಾಧಗಳಿಗೆ ನಾವು ಅವರನ್ನು ಹೊಣೆಗಾರರನ್ನಾಗಿ ಮಾಡುತ್ತೇವೆ. ಇಂದು, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯು ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಬಹಿರಂಗಪಡಿಸಲು “ಬಿಜೆಪಿಯ ಪಾಪದ ಪುರಾಣ”ವನ್ನು ಬಿಡುಗಡೆ ಮಾಡುವ ಮೂಲಕ ಬಿಜೆಪಿಯ ಭ್ರಷ್ಟಾಚಾರ, ನೀತಿ ನಿರೂಪಣೆ ವೈಫಲ್ಯ, ಮತ್ತು ಈಡೇರದ ಭರವಸೆಗಳ ದಾಖಲೆಯನ್ನು ನಿಮ್ಮ ಮುಂದಿಡುತ್ತಿದ್ದೇವೆ ಎಂದು ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ.
2013-18ರಲ್ಲಿ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದು ಸ್ಥಿರ ಸರ್ಕಾರ ಮತ್ತು ಸ್ವಚ್ಛ ಆಡಳಿತ ನೀಡಿದೆ. ಕನ್ನಡಿಗರಿಗೆ ಬಿಜೆಪಿ ತಂದಿರುವ ಸಂಕಷ್ಟವನ್ನು ಹೋಗಲಾಡಿಸಲು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ. ನಮ್ಮ ಸಹೃದಯ ಕನ್ನಡಿಗರೊಂದಿಗೆ ಸೇರಿ ಕನಸಿನ ಕರ್ನಾಟಕವನ್ನು ಕಟ್ಟಲು ನಾವು ಬದ್ಧರಾಗಿದ್ದೇವೆ. ಇದಕ್ಕಾಗಿ ನಾವು ಜನರ ಆಶೋತ್ತರಗಳನ್ನು ಸಂಗ್ರಹಿಸುತ್ತಿದ್ದೇವೆ. ಅದೇ ‘ಪ್ರಜಾಧ್ವನಿ’. ಈ ಹಿನ್ನೆಲೆಯಲ್ಲಿ ನಾವು ‘prajadhwani.com’ ವೆಬ್ಸೈಟ್ ಅನ್ನು ಪ್ರಾರಂಭಿಸುತ್ತಿದ್ದೇವೆ. ಜನರು ತಮ್ಮ ಸಲಹೆ, ನಿರೀಕ್ಷೆಗಳನ್ನು ದಾಖಲಿಸಬಹುದು. ‘9537 224 224’ ಈ ಸಂಖ್ಯೆಗೆ ಕರೆ ಮಾಡಿಯೂ ಪ್ರತಿಯೊಬ್ಬ ಕನ್ನಡಿಗರು ಆಕಾಂಕ್ಷೆಗಳನ್ನು ವ್ಯಕ್ತಪಡಿಸಬಹುದಾಗಿದೆ. ಕನ್ನಡಿಗರ ಎಲ್ಲ ಕನಸುಗಳನ್ನು ನನಸಾಗಿಸಲು ನಾವು ಶ್ರಮಿಸುತ್ತೇವೆ ಎಂದು ಕಾಂಗ್ರೆಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
2023 ರ ಜನವರಿ 11 ರಂದು ಬೆಳಗಾವಿಯಲ್ಲಿ ಪ್ರಾರಂಭವಾಗುವ ‘ಪ್ರಜಾಧ್ವನಿ’ ಯಾತ್ರೆಯ ಮೂಲಕ ನಾವು ಪ್ರತಿಯೊಬ್ಬ ಕನ್ನಡಿಗರನ್ನು ಭೇಟಿ ಮಾಡುತ್ತೇವೆ. ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಮತ್ತು ವಿಧಾನಸಭೆ ಪ್ರತಿಪಕ್ಷದ ನಾಯಕರಾದ ಶ್ರೀ ಸಿದ್ದರಾಮಯ್ಯ ಅವರು ಜಂಟಿಯಾಗಿ ಈ ಯಾತ್ರೆಯನ್ನು ಮುನ್ನಡೆಸಲಿದ್ದಾರೆ. ಈ 40% ಸರ್ಕಾರದ ವಿರುದ್ಧ ಜನಸಾಮಾನ್ಯರು ಸಾಮೂಹಿಕ ಧ್ವನಿ ಎತ್ತಲು ನಾವು ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡುತ್ತೇವೆ. ಈ ಸಂದರ್ಭದಲ್ಲಿ ನಮ್ಮ ಅಭಿಯಾನದ ಲಾಂಛನವನ್ನು ಬಿಡುಗಡೆ ಮಾಡುತ್ತೇವೆ. ಇದು ಕರ್ನಾಟಕದ ಭರವಸೆ ಮತ್ತು ಸಮೃದ್ಧ ಭವಿಷ್ಯದ ಸಂಕೇತವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.