ಭದ್ರಾ ಕಾಲುವೆಗೆ ಇಳಿದು ರೈತರಿಂದ ಪ್ರತಿಭಟನೆ

ದಾವಣಗೆರೆ: ಭದ್ರಾ ನೀರು ಹರಿಸಲು ಪ್ರಾರಂಭಿಸಿ ಇಂದಿಗೆ 4 ದಿನಗಳಾದರೂ ಕಾಲುವೆಗಳಲ್ಲಿ ನೀರು ಬರದಿರುವುದನ್ನು ಖಂಡಿಸಿ, ಇಂದು ಬೆಳಿಗ್ಗೆ ರೈತರು ಕುಂದುವಾಡದ ಬಳಿ ಕಾಲುವೆಗೆ ಇಳಿದು ರೈತ ಮುಖಂಡ ಕೊಳೇನಹಳ್ಳಿ ಬಿ ಎಂ ಸತೀಶ್ ರವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಿ ಎಂ ಸತೀಶ್ ರವರು ಭದ್ರಾ ನೀರಾವರಿ ಸಲಹಾ ಸಮಿತಿ (ಐಸಿಸಿ)ಯು ಅವೈಜ್ಞಾನಿಕ ವೇಳಾಪಟ್ಟಿಯಿಂದ ನೀರು ಕಾಲುವೆಗಳಲ್ಲಿ ನೀರು ಬಂದಿಲ್ಲ. ಐಸಿಸಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನರವರು ಭಾಗವಹಿಸಿ ದಾವಣಗೆರೆ ಜಿಲ್ಲೆಯಲ್ಲಿ ಶೇಕಡ 70 ರಷ್ಟು ಅಚ್ಚುಕಟ್ಟು ಪ್ರದೇಶ ಇದೆ. ಹೆಚ್ಚಿನ ಪ್ರಮಾಣದಲ್ಲಿ ನೀರು ಬೇಕು ಎಂದು ಅಂಕಿ ಅಂಶಗಳ ಸಹಿತ ವಾದ ಮಂಡಿಸಿ, ನೀರು ಬಿಡಿಸುವ ಪ್ರಮಾಣ ಮತ್ತು ಅವಧಿ ಲೆಕ್ಕಾಚಾರದಂತೆ ವೇಳಾಪಟ್ಟಿ ನಿಗಧಿ ಮಾಡಿಸಬೇಕಾಗಿತ್ತು. ಆದರೆ ಅವರು ನಿರ್ಲಕ್ಷ್ಯ ಮತ್ತು ರೈತ ವಿರೋಧಿ ಧೋರಣೆಯಿಂದ ಐಸಿಸಿ ಸಭೆಗೆ ಗೈರು ಹಾಜರಾಗಿ, ಜಿಲ್ಲೆಯಲ್ಲಿ ನೀರಿನ ಹಾಹಾಕಾರಕ್ಕೆ ಕಾರಣಕರ್ತರಾಗಿದ್ದಾರೆ ಎಂದು ಆರೋಪಿಸಿದರು.

ರೈತ ಕುಂದುವಾಡದ ಜಿಮ್ಮಿ ಹನುಮಂತಪ್ಪ ಮಾತನಾಡಿ ಸುಮಾರು ಹತ್ತಿಪ್ಪತ್ತು ವರ್ಷಗಳಿಂದ ಕಷ್ಟಪಟ್ಟು ಬೆವರು ಸುರಿಸಿ, ತೋಟದ ಬೆಳೆಗಳಿಗೆ ನೀರುಣಿಸಲು ಸಾಧ್ಯವಾಗುತ್ತಿಲ್ಲ. ನಾವು ರೈತರು ಅನ್ನ ಕೊಡುವವರು ಕನ್ನ ಹಾಕುವವರಲ್ಲ. ಸರ್ಕಾರ ನೀರಿಲ್ಲದೆ ಕಂಗಾಲಾಗಿರುವ ನಮ್ಮ ಸಂಕಷ್ಟಕ್ಕೆ ಧಾವಿಸಬೇಕು ಎಂದು ಆಗ್ರಹಿಸಿದರು.

ಯುವ ರೈತ ಕುಂದುವಾಡದ ಪುನೀತ್ ಮಾತನಾಡಿ ಭದ್ರಾ ನೀರು ಬರದಿರುವುದರಿಂದ ತೋಟಗಳು ಒಣಗಿ ಹೋಗಿವೆ. ಕೊಳವೆಬಾವಿಗಳಲ್ಲಿ ನೀರಿಲ್ಲದೆ ಅಂತರ್ಜಲ ಮಟ್ಟ ಕುಸಿದಿದೆ. ಪಶು ಪಕ್ಷಿಗಳಿಗೂ ನೀರು ಇಲ್ಲದೆ ಹಾಹಾಕಾರ ಎದ್ದಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಮಾಜಿ ಎಪಿಎಂಸಿ ಅಧ್ಯಕ್ಷ ಹೆಚ್ ಜಿ ಗಣೇಶಪ್ಪನವರು ಮಾತನಾಡಿ ಭದ್ರಾ ನೀರು ಕಾಲುವೆಯಲ್ಲಿ ಬಂದಿಲ್ಲ. ದನಕರುಗಳಿಗೂ ನೀರು ಮೇವು ಇಲ್ಲದೆ ಸಿಕ್ಕ ಸಿಕ್ಕ ರೇಟ್ ಗೆ ಮಾರಾಟ ಮಾಡುತ್ತಿದ್ದೇವೆ. ಜಿಲ್ಲಾ ಸಚಿವ ಎಸ್ ಎಸ್ ಮಲ್ಲಿಕಾರ್ಜುನರವರ ದಿವ್ಯ ನಿರ್ಲಕ್ಷ್ಯದಿಂದಾಗಿ ರೈತರು ನೀರಿಲ್ಲದೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿ ಬಂದಿದೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ರೈತ ಮುಖಂಡ ಬೆಳವನೂರು ನಾಗೇಶ್ವರರಾವ್, ಮಾಜಿ ಮೇಯರ್ ಹೆಚ್ ಎನ್ ಗುರುನಾಥ್, ಮುಖಂಡರಾದ ಭಾಸ್ಕರ್ ರೆಡ್ಡಿ, ಅಣ್ಣಪ್ಪ, ಬಿ ಮಹೇಶಪ್ಪ, ಗದಿಗೇಶ ಹಂಚಿನಮನೆ, ತಿಪ್ಪಣ್ಣಹರಿಹರ, ಹೆಚ್ ಎನ್ ಮಹಾಂತೇಶ, ಹೆಚ್ ಎಸ್ ಸೋಮಶೇಖರ, ಕ್ಯಾಂಪ್ ನಾಗೇಶ್ವರರಾವ್, ರಾಮಕೃಷ್ಣಪ್ಪ ಮುಂತಾದವರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!