ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸುವಂತೆ ಆಗ್ರಹಿಸಿ ದಾವಣಗೆರೆಯಲ್ಲಿ ಪ್ರತಿಭಟನೆ

IMG-20211228-WA0009

 

ದಾವಣಗೆರೆ: ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ, ರಾಜ್ಯ ಸರಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿಯಿಂದ ಮಂಗಳವಾರ ನಗರದ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ನಗರದ ಗುಂಡಿ ವೃತ್ತದಿಂದ ಮೆರವಣಿಗೆ ಮೂಲಕ ಜಯದೇವ ವೃತ್ತಕ್ಕೆ ಆಗಮಿಸಿದ ಪ್ರತಿಭಟನಾ ನಿರತ ಅತಿಥಿ ಉಪನ್ಯಾಸಕರು ಮಾನವ ನಿರ್ಮಿತ ಸರಪಳಿ ರಚಿಸಿ ರಸ್ತೆ ತಡೆ ಮಾಡಿ ಸಕರಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಮಾತನಾಡಿದ ಸಂಘಟನೆಯ ರಾಜ್ಯಾಧ್ಯಕ್ಷ ಹೆಚ್.ಕೊಟ್ರೇಶ್, ರಾಜ್ಯದ ೪೩೦ ಸರಕಾರಿ ಪದವಿ ಕಾಲೇಜುಗಳಲ್ಲಿ ೧೪,೫೦೦ ಜನ ಅತಿಥಿ ಉಪನ್ಯಾಸಕರು ಹಲವಾರು ವರ್ಷಗಳಿಂದ ಕೇವಲ ೧೧ ರಿಂದ ೧೩ ಸಾವಿರ ರು., ಕನಿಷ್ಠ ಗೌರವ ಧನ ತೆಗೆದುಕೊಂಡು, ಯಾವುದೇ ಕೆಲಸದ ಭದ್ರತೆಯಿಲ್ಲದೆ ಕಾರ್ಯ ನಿರ್ವಾಹಿಸುತ್ತಾ ಬಂದಿದ್ದು, ಈ ಬಗ್ಗೆ ಸಾಕಷ್ಟು ಬಾರಿ ಅಧಿಕಾರಕ್ಕೆ ಬರುವ ಸರಕಾರಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು

ಇತರೆ ರಾಜ್ಯಗಳಲ್ಲಿ ಸೇವಾ ಭದ್ರತೆ/ ಸೇವಾ ಸಕ್ರಮಾತಿ ನೀಡಿದ ನಿದರ್ಶನಗಳಿವೆ. ಉಚ್ಛ ನ್ಯಾಯಾಲಯ ಕೆ.ಎ.ಟಿ ತೀರ್ಪಗಳಿದ್ದರೂ ಸರ್ಕಾರ ಪರಿಗಣಿಸದೇ ಇರುವದು, ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾದರೂ ವಿದ್ಯಾರ್ಥಿಗಳಿಗೆ ಪಠ್ಯಕ್ರಮ ಸಿಗದೇ ಇರುವುದು, ವಿದ್ಯಾರ್ಥಿಗಳ ಅನುಪಾತ ಹೆಚ್ಚಿಸಿರುವುದು ಇಷ್ಟೆಲ್ಲಾ ನೂನ್ಯತೆಗಳಿವೆ ಎಂದು ಖಂಡಿಸಿದರು.

ಇವೆಲ್ಲ ನ್ಯೂನತೆಗಳನ್ನು ಖಂಡಿಸಿ ಕಳೆದ ಡಿ.೧೦ರಿಂದ ಇಲ್ಲಿಯವರೆಗೆ ರಾಜ್ಯಾದ್ಯಂತ ಎಲ್ಲಾ ಅತಿಥಿ ಉಪನ್ಯಾಸಕರು ಅನಿರ್ದಿಷ್ಟಾವಧಿ ತರಗತಿ ಬಹಿಷ್ಕರಿಸಿ ಬೇಡಿಕೆ ಈಡೇರಿಕೆಗಾಗಿ ಮುಷ್ಕರದಲ್ಲಿದ್ದೇವೆ. ೪ ಲಕ್ಷಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಸರ್ಕಾರಿ ಕಾಲೇಜುಗಳಲ್ಲಿ ಓದುತ್ತಿದ್ದು, ಕಾಲೇಜುಗಳಲ್ಲಿ ಪಾಠ ಪ್ರವಚನಗಳಿಲ್ಲದೆ ಅತಂತ್ರಸ್ಥಿತಿಯಲ್ಲಿದ್ದಾರೆ. ಇಷ್ಟಾದರೂ ಸರಕಾರ ನಮ್ಮ ಕಡೆಗೆ ಗಮನಹರಿಸಿ ಬೇಡಿಕೆ ಈಡೇರಿಸುತ್ತಿಲ್ಲ ಎಂದು ಕಿಡಿಕಾರಿದರು.

ಕೂಡಲೇ ಸರಕಾರ ಆತ್ಮಹತ್ಯೆ ಮಾಡಿಕೊಂಡ ಹರ್ಷ ಶಾನಬೋಗ ಉಪನ್ಯಾಸಕರ ಕುಟುಂಬಕ್ಕೆ ೨೫ ಲಕ್ಷ ಪರಿಹಾರ ನೀಡುವುದು ಹಾಗೂ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡಬೇಕೆಂದು ಆಗ್ರಹಿಸಿ, ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳ ಮೂಲಕ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ ನಾರಾಯಣ ಅವರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷರಾದ ಡಾ. ಟಿ.ಜಿ. ಮಲ್ಲಿಕಾರ್ಜುನ, ಡಾ. ಎ.ಕೆ. ಬಸವರಾಜ, ಪಿ.ವಿ. ಸಿದ್ದಮ್ಮ, ಹೆಚ್. ನಿಂಗಪ್ಪ, ಕೆ. ಮೋಹನ್, ಡಾ. ಎಂ. ಪ್ರಭಾಕರ್, ಆರ್. ಶಂಕರನಾಯ್ಕ್, ಕೆ.ಜಿ. ಪ್ರಕಾಶ್, ಗೋವಿಂದ ರೆಡ್ಡಿ, ವೆಂಕಟೇಶ್, ಹೆಚ್.ಎಸ್. ಶ್ವೇತಾ, ರಂಗನಾಥ್, ನವೀನ್ ಗಂಗಾಧರ್ ರೂಗಿ, ಡಾ. ದೇವೆಂದ್ರಪ್ಪ, ಧನಂಜಯ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *

error: Content is protected !!