ಯುದ್ಧದ ನಡುವೆ ಸುದ್ದಿಯಲ್ಲಿರುವ ಪುಟಿನ್ ಪ್ರೇಯಸಿ!
ಬೆಂಗಳೂರು : ರಷ್ಯಾ -ಉಕ್ರೇನ್ ಸಮರದ ನಡುವೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಪ್ರೇಯಸಿ ಸುದ್ದಿಯಲ್ಲಿದ್ದಾರೆ. ಮಾಜಿ ಜಿಮ್ನಾಸ್ಟ್ ಒಲಿಂಪಿಕ್ ಚಿನ್ನದ ಪದಕ ವಿಜೇತೆ 38 ವರ್ಷದ ಅಲೀನಾ ಕಬೇವಾ ಪುಟಿನ್ ಅವರ ಪ್ರೇಯಸಿ ಎಂದು ಹೇಳಲಾಗ್ತಿದೆ. ಈ ಬಗ್ಗೆ ಪುಟಿನ್ ಎಲ್ಲೂ ಅಧಿಕೃತ ಹೇಳಿಕೆ ಕೊಟ್ಟಿಲ್ಲ. ಪ್ರಸ್ತುತ ಉಕ್ರೇನ್ ಮೇಲೆ ದಾಳಿ ಮಾಡಿದ ಕಾರಣಕ್ಕೆ ಪುಟಿನ್ ಕುಟುಂಬಕ್ಕೆ ಅಪಾಯವಿದೆ. ಅವರನ್ನು ಟಾರ್ಗೆಟ್ ಮಾಡುವ ಸಾಧ್ಯತೆ ಇದೆ. ಹಾಗಾಗಿ, ಪ್ರೇಯಸಿ ಅಲೀನಾ ಮತ್ತು ಮೂವರು ಮಕ್ಕಳನ್ನು ಪುಟಿನ್ ಸ್ವಿಟ್ಜರ್ಲೆಂಡ್ ಐಶಾರಾಮಿ ವಿಲ್ಲಾದಲ್ಲಿ ಅಡಗಿಸಿಟ್ಟಿದ್ದಾರಂತೆ. ಈ ವಿಷಯ ಗೊತ್ತಾಗುತ್ತಿದ್ದಂತೆ ಸ್ವಿಟ್ಜರ್ಲೆಂಡ್ ವಿರುದ್ಧ ಜನರು ತಿರುಗಿ ಬಿದ್ದಿದ್ದಾರೆ. ಪುಟಿನ್ ಪ್ರೇಯಸಿ ಅಲೀನಾ ಮತ್ತು ಮಕ್ಕಳನ್ನು ಹೊರದಬ್ಬಬೇಕು. ಅವರಿಗೆ ಆಶ್ರಯ ಕೊಡಬಾರದು ಎಂದು ಸ್ವಿಟ್ಜರ್ಲೆಂಡ್ ಮೇಲೆ ಒತ್ತಡ ಹೇರುತ್ತಿದ್ದಾರೆ. ಈ ಸಂಬ0ಧ ಸುಮಾರು 50 ಸಾವಿರಕ್ಕೂ ಹೆಚ್ಚು ಜನರು ಸಹಿ ಮಾಡಿರುವ ಅರ್ಜಿಯನ್ನು ಸ್ವಿಟ್ಜರ್ಲೆಂಡ್ ಗೆ ನೀಡಲಾಗಿದೆ ಎನ್ನಲಾಗಿದೆ.
ಪ್ರಸ್ತುತ ಯುದ್ಧದ ಹೊರತಾಗಿಯೂ ಸ್ವಿಟ್ಜರ್‌ಲೆಂಡ್, ಪುಟಿನ್ ಆಡಳಿತದ ಸಹಚರರಿಗೆ ಆಶ್ರಯ ನೀಡುವುದನ್ನು ಮುಂದುವರೆಸಿದೆ ಎಂದು ಜರ್ಮನ್, ಫ್ರೆಂಚ್ ಮತ್ತು ಇಂಗ್ಲಿಷ್‌ನಲ್ಲಿ ಅರ್ಜಿ ಬರೆದು ಪೋಸ್ಟ್ ಮಾಡಲಾಗಿದೆ. ಉಕ್ರೇನ್ ಮೇಲಿನ ಯುದ್ಧದ ಸಂದರ್ಭದಲ್ಲೇ ಅಲೀನಾ ಅವರನ್ನು ಸ್ವಿಟ್ಜರ್‌ಲೆಂಡ್‌ಗೆ ಕಳುಹಿಸಲಾಗಿದೆ. ಈಕೆ ಪುಟಿನ್ ಅವರ ಯುನೈಟೆಡ್ ರಷ್ಯಾ ಪಕ್ಷವನ್ನು ಪ್ರತಿನಿಧಿಸುವ ಸಂಸತ್ ಸದಸ್ಯರಾಗಿ 6 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಕಳೆದ ಏಳು ವರ್ಷಗಳಿಂದ ಪ್ರಮುಖ ಕ್ರೆಮ್ಲಿನ್ ಪರ ಮಾಧ್ಯಮ ಸಮೂಹದ ನ್ಯಾಷನಲ್ ಮೀಡಿಯಾ ಗ್ರೂಪ್ ನಿರ್ದೇಶಕರ ಮಂಡಳಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು 2004ರ ಒಲಿಂಪಿಕ್ಸ್ನಲ್ಲಿ ರಿದಮಿಕ್ ಜಿಮ್ನಾಸ್ಟಿಕ್‌ನಲ್ಲಿ ಚಿನ್ನ ಗೆದ್ದಿದ್ದರು.