ದಾವಣಗೆರೆಯ ನಿಜವಾದ ಜೋಡೆತ್ತುಗಳು ರವೀಂದ್ರನಾಥ್, ಸಿದ್ದಣ್ಣ: ಬಾಡದ ಆನಂದರಾಜು

ದಾವಣಗೆರೆ : ಶೋಷಿತರ ದನಿಯಾಗಿ ಜೋಡೆತ್ತುಗಳಂತೆ ಬಿಜೆಪಿಯಲ್ಲಿ ಕೆಲಸ ಮಾಡುತ್ತಿರುವ ನಾಯಕರೆಂದರೆ ಅದು ಸಂಸದರಾದ ಜಿ.ಎಂ ಸಿದ್ಧೇಶ್ವರ ಹಾಗೂ ಶಾಸಕರಾದ ಎಸ್.ಎ ರವೀಂದ್ರನಾಥ್ ಎಂದು ಬಾಡದ ಆನಂದರಾಜು ತಿಳಿಸಿದರು.
ಮಹಾನಗರ ಪಾಲಿಕೆ ಮೇಯರ್ ಆಯ್ಕೆ ವಿಚಾರದಲ್ಲಿ ಶೋಷಿತ ವರ್ಗದ ಮಹಿಳೆಗೆ ಅವಕಾಶ ನೀಡಿರುವುದು ನಿಜಕ್ಕೂ ಉತ್ತಮ ಬೆಳವಣಿಗೆ. ಎಂಪಿ, ಎಂಎಲ್ ಎ ಚುನಾವಣೆ ರೀತಿ ತಾವೇ ಸ್ಪರ್ಧೆ ಮಾಡಿದ್ದೇವೆ ಎಂಬಂತೆ ತಮ್ಮ ಚುನಾವಣೆಯಂತೆಯೇ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನೂ ಸಹ ಅತ್ಯಂತ ಜವಾಬ್ದಾರಿಯಿಂದ ಮಾಡುತ್ತಿದ್ದಾರೆ. ಇದಕ್ಕೆ ಸಾಕ್ಷಿ ಮಹಾನಗರ ಪಾಲಿಕೆಯ ಮೇಯರ್ ಚುನಾವಣೆ ಎಂದರು. ಒಂದು ನಿಗದಿತ ಗುರಿ ಮುಟ್ಟಬೇಕೆಂದರೆ ನಾಯಕತ್ವ ಮುಖ್ಯವಾಗಿರುತ್ತದೆ. ಜಿಲ್ಲೆಯಲ್ಲಿ ಬಿಜೆಪಿ ಪಕ್ಷದ ಉಭಯ ನಾಯಕರಾದ ಸಂಸದರಾದ ಸಿದ್ದೇಶ್ವರ ಹಾಗೂ ಶಾಸಕ ಎಸ್.ಎ ರವೀಂದ್ರನಾಥ್ ಅವರು ಬಿಜೆಪಿ ರಥವನ್ನ ಅಚ್ಚುಕಟ್ಟಾಗಿ ಎಳೆಯುತ್ತಿದ್ದಾರೆ. ಪಕ್ಷ ಸಂಘಟನೆ, ಚುನಾವಣೆ, ಕಾರ್ಯಕರ್ತರನ್ನ ನಡೆಸಿಕೊಳ್ಳುವ ರೀತಿ ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.
ಜಿಲ್ಲೆಯಲ್ಲಿ ಉಭಯ ನಾಯಕರು ಅಭಿವೃದ್ಧಿ ವಿಚಾರದಲ್ಲೂ ಸಾಕಷ್ಟು ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ನಗರದ ಹೃದಯ ಭಾಗದಲ್ಲಿ ಸಂವಿಧಾನ ಶಿಲ್ಪಿ, ಮಾನವತಾವಾದಿ ಡಾ. ಬಿ ಆರ್ ಅಂಬೇಡ್ಕರ್ ಅವರ ಕಂಚಿನ ಪುತ್ಥಳಿ ಸ್ಥಾಪಿಸಿರುವುದು ನಿಜಕ್ಕೂ ಹೆಮ್ಮೆಯ ವಿಚಾರವಾಗಿದ್ದು ಇಡೀ ಶೋಷಿತ ವರ್ಗದ ಪರವಾಗಿ ನಾನು ಹೃತ್ಪೂರ್ವಕವಾಗಿ ಅಭಿನಂದಿಸುತ್ತಾ ಸ್ವಾಗತಿಸುತ್ತಿದ್ದೇನೆ ಎಂದರು. ದಾವಣಗೆರೆ ಪ್ರಥಮ ಪ್ರಜೆ ಜಯಮ್ಮ ಗೋಪಿ ನಾಯ್ಕ್ ಅವರನ್ನ ಮೇಯರ್ ಆಗಿ ಆಯ್ಕೆ ಮಾಡುವ ಮೂಲಕ ಬಿಜೆಪಿ ಪಕ್ಷ ಹಾಗೂ ಸಂಸದರಾದ ಸಿದ್ದೇಶ್ವರ ಮತ್ತು ಶಾಸಕರಾದ ರವೀಂದ್ರನಾಥ ಅವರು ಶೋಷಿತರ ಪರವಾಗಿದ್ದಾರೆ ಎಂದು ತೋರಿಸಿಕೊಟ್ಟಿದ್ದಾರೆ ಎಂದು ಶೋಷಿತ ವರ್ಗದ ಮುಖಂಡರಾದ ಬಾಡದ ಆನಂದರಾಜು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ನೂತನ ಮಹಾಪೌರರಾದ ಜಯಮ್ಮ ಗೋಪಿನಾಯ್ಕ್, ದೂಡ ಅಧ್ಯಕ್ಷರಾದ ದೇವರಮನಿ ಶಿವಕುಮಾರ, ಮಾಜಿ ಮಹಾ ಪೌರ ಎಸ್.ಟಿ.ವಿರೇಶ್, ಮಾಜಿ ಶಾಸಕ ಬಸವರಾಜನಾಯ್ಕ್, ಮಹಾ ನಗರ ಪಾಲಿಕೆ ಸದಸ್ಯ ಹಾಗೂ ಲೆಕ್ಕ ಪತ್ರ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಯ್ಕ್, ಸಿ. ಉಮೇಶ್ ನಾಯ್ಕ್, ಮಾಜಿ ನಗರ ಪಾಲಿಕೆ ಸದಸ್ಯ ಶಿವನಗೌಡ ಪಾಟೇಲ್ ಮುಂತಾದವರು ಸಂಸದ ಜಿ.ಎಂ. ಸಿದ್ದೇಶ್ವರ ಅವರನ್ನ ಸನ್ಮಾನಿಸಿ ಅಭಿನಂದಿಸಿದರು.