ಸಾರ್ವಜನಿಕರ ಗಮನ ಸೆಳೆಯುತ್ತಿರುವ ಹೊಸಪೇಟೆ ಜಂಕ್ಷನ್, ಟ್ವೀಟ್ ಮಾಡಿರುವ ರೈಲ್ವೆ ಇಲಾಖೆ
ವಿಜಯನಗರ : ವಿಜಯನಗರ ಜಿಲ್ಲೆಯ ಹೊಸಪೇಟೆ ರೈಲು ನಿಲ್ದಾಣ ಸಾರ್ವಜನಿಕರ ಗಮನ ಸೆಳೆಯುತ್ತಿದೆ. ಮಾತ್ರವಲ್ಲದೆ ಹೊಸಪೇಟೆ ಜಂಕ್ಷನ್‌ನ ನಿಲ್ದಾಣದ ದ್ವಾರ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಎಲ್ಲರ ಪ್ರಶಂಸೆಗೆ ಕಾರಣವಾಗಿದೆ. ಯುನೆಸ್ಕೋ ಪಾರಂಪರಿಕ ಮಾನ್ಯತೆ ಪಡೆದ ಪ್ರಖ್ಯಾತ ಹಂಪಿಯ ಕಲ್ಲಿನ ರಥದ ಮಾದರಿಯಲ್ಲಿ ಹೊಸಪೇಟೆ ಜಂಕ್ಷನ್ ಮುಖ್ಯದ್ವಾರವನ್ನು ನಿರ್ಮಿಸಲಾಗುತ್ತಿದೆ. ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದ್ದು, ಬಣ್ಣ ಬಳಿಯುವ ಕಾರ್ಯ ಪ್ರಗತಿಯಲ್ಲಿದೆ. ಹೊಸಪೇಟೆ ಜಂಕ್ಷನ್ ಅಂದ ಗಮನಿಸಿರುವ ರೈಲ್ವೆ ಇಲಾಖೆ ಟ್ವೀಟ್ ಮಾಡಿದೆ. ಹೊಸಪೇಟೆ ಕರ್ನಾಟಕದ ನೂತನ ಜಿಲ್ಲೆಯಾದ ವಿಜಯನಗರ ಕೇಂದ್ರಸ್ಥಾನವಾಗಿದೆ. ಕರ್ನಾಟಕದ 31ನೇ ಜಿಲ್ಲೆಯಾಗಿ ವಿಜಯನಗರ 2021 ಫೆಬ್ರವರಿ 8 ರಂದು ಅಸ್ತಿತ್ವಕ್ಕೆ ಬಂದಿತು. ವಿಶ್ವವಿಖ್ಯಾತ ಹಂಪಿ ಈ ಜಿಲ್ಲೆಯ ವ್ಯಾಪ್ತಿಯಲ್ಲಿದೆ. ಆದ್ದರಿಂದ ಹಂಪಿ ಕಲ್ಲಿನ ರಥದ ಮಾದರಿಯಲ್ಲಿಯೇ ರೈಲು ನಿಲ್ದಾಣ ನಿರ್ಮಾಣ ಮಾಡಲಾಗಿದೆ. ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ ಹೊಸಪೇಟೆಯಲ್ಲಿನ ಆರ್.ಒ.ಎಚ್ ಶೆಡ್‌ಗೆ ಭೇಟಿ ನೀಡಿದ್ದರು. ಶೆಡ್ ಪರಿಶೀಲನೆ ನಡೆಸಿ ಸಿಬ್ಬಂದಿಗಳೊಂದಿಗೆ ಸಂವಾದ ನಡೆಸಿದ್ದರು. ಶೇ.100ರ ಸುರಕ್ಷತೆಯೊಂದಿಗೆ ಸಂಪೂರ್ಣ ದೋಷರಹಿತ ನಿರ್ವಹಣೆಯನ್ನು ಮಾಡುವ ನಿಟ್ಟಿನಲ್ಲಿ ಮಾರ್ಗದರ್ಶನ ನೀಡಿದ್ದರು.
ರೈಲಿಗೆ ಬೋಗಿ ಜೋಡಣೆ ನೈಋತ್ಯ ರೈಲ್ವೆ ರೈಲು ಸಂಖ್ಯೆ 22685/22686 ಯಶವಂತಪುರ-ಚಂಡೀಗಢ -ಯಶವಂತಪುರ ದ್ವಿ ಸಾಪ್ತಾಹಿಕ ಎಕ್ಸ್ಪ್ರೆಸ್ ರೈಲಿಗೆ ಒಂದು ಹೆಚ್ಚುವರಿ ಎರಡನೇ ದರ್ಜೆಯ ಬೋಗಿಯನ್ನು ಮಾರ್ಚ್ 16ರಿಂದ ಸೇರಿಸುತ್ತಿದೆ. 17/3/2022ರಿಂದ ಯಶವಂತಪುರ, 18/3/2022ರಿಂದ ಜಾರಿಗೆ ಬರುವಂತೆ ಪಂಢರಪುರ್ ನಿಲ್ದಾಣದಿಂದ ಜಾರಿಗೆ ಬರುವಂತೆ ಯಶವಂತಪುರ-ಪಂಡರಾಪುರ -ಯಶವಂತಪುರ ಸಾಪ್ತಾಹಿಕ ಎಕ್ಸ್ಪ್ರೆಸ್ ರೈಲಿಗೆ ಒಂದು ಹೆಚ್ಚುವರಿ 2ನೇ ದರ್ಜೆಯ ಸ್ಲೀಪರ್ ಬೋಗಿಯನ್ನು ಶಾಶ್ವತವಾಗಿ ಜೋಡಿಸಲಾಗುತ್ತದೆ. ಹೋಳಿ ಹಬ್ಬದ ಪ್ರಯುಕ್ತ ವಿಶೇಷ ರೈಲು ನೈಋತ್ಯ ರೈಲ್ವೆ ಹೋಳಿ ಹಬ್ಬದ ಪ್ರಯುಕ್ತ ವಿಶೇಷ ರೈಲನ್ನು ಓಡಿಸಲಿದೆ. ಹಬ್ಬದ ಸಂದರ್ಭದಲ್ಲಿ ಉಂಟಾಗುವ ಜನ ದಟ್ಟಣೆಯನ್ನು ಕಡಿಮೆ ಮಾಡಲು ಒಂದು ಮಾರ್ಗದ ವಿಶೇಷ ದರದ ರೈಲನ್ನು ಯಶವಂತಪುರ-ಗೋರಖಪುರ ನಡುವೆ ಓಡಿಸಲಿದೆ. ವಿಶೇಷ ದರವಿರುವ ರೈಲು ಸಂಖ್ಯೆ 06597 ಯಶವಂತಪುರ-ಗೋರಖಪುರ (ಒಂದು ಮಾರ್ಗದ ಸೇವೆ) ವಿಶೇಷ ಎಕ್ಸ್ಪ್ರೆಸ್ ರೈಲು ಮಾರ್ಚ್ 17ರಂದು ಯಶವಂತಪುರ ನಿಲ್ದಾಣದಿಂದ ಹೊರಡಲಿದೆ.
ಮಾರ್ಚ್ 17ರಂದು ರೈಲು ಸಂಖ್ಯೆ 06597 ಯಶವಂತಪುರ-ಗೋರಖಪುರ ವಿಶೇಷ ರೈಲು ಬೆಂಗಳೂರಿನ ಯಶವಂತಪುರದಿಂದ ಸಂಜೆ 5.20ಕ್ಕೆ ಹೊರಡಲಿದೆ. ಮೂರನೇ ದಿನ ಸಂಜೆ 7.30ಕ್ಕೆ ಗೋರಖಪುರ ತಲುಪಲಿದೆ.
ವಿಶೇಷ ರೈಲು ಹಿಂದೂಪುರ, ಧರ್ಮಾವರಂ, ಅನಂತಪುರ, ಗುಂತಕಲ್, ಅದೋನಿ, ಮಂತ್ರಾಲಯ ರೋಡ್, ರಾಯಚೂರು, ಬೇಗಮಪೇಟ, ಸಿಕಂದರಾಬಾದ್, ಕಾಜಿಪೇಟ್, ರಾಮಗುಂಡ, ಮಂಚಿರಿಯಾಲ್, ಬೆಲ್ಲಂಪಲ್ಲಿ, ಬಲಾರ್ಶಾ, ಚಂದ್ರಾಪುರ್, ನಾಗ್ಪುರ, ಆಮಲಾ, ಬೇತುಲ್, ಘೋರಾಡ್ರೊಂಗಿ, ಇಟಾರ್ಸಿ, ಜಬಲ್ಪುರ್, ಕಟನಿ, ಸತನಾ, ಬಾಂದಾ, ಕಾನ್ಪುರ ಸೆಂಟ್ರಲ್, ಉನ್ನಾವ್, ಐಶಬಾಗ್, ಬಾದಶಾ ನಗರ, ಬಾರಾಬಂಕಿ, ಗೊಂಡಾ, ಮಂಕಾಪುರ, ಬಸ್ತಿ ಮತ್ತು ಖಲೀಲಾಬಾದ್ ನಿಲ್ದಾಣಗಳಲ್ಲಿ ನಿಲ್ಲಲಿದೆ. ಈ ವಿಶೇಷ ರೈಲು 22 ಬೋಗಿಯನ್ನು ಹೊಂದಿದೆ. ಎರಡು ಎಸಿ 3-ಟೈರ್ ಬೋಗಿಗಳು, 10 ಎರಡನೇ ದರ್ಜೆ ಸ್ಲೀಪರ್ ಬೋಗಿಗಳು, 6 ಸಾಮಾನ್ಯ ದರ್ಜೆಯ ಬೋಗಿಗಳು, 1 ಸೆಕೆಂಡ್ ಸೀಟಿಂಗ್ ಕ್ಲಾಸ್, ಒಂದು ಪ್ಯಾಂಟ್ರಿ ಕಾರ್ ಹಾಗೂ ಎರಡು ಎರಡನೇ ದರ್ಜೆಯ ಲಗೇಜ್ ಕಮ್ ಬ್ರೇಕ್-ವ್ಯಾನ್‌ಗಳು ಹಾಗೂ ದಿವ್ಯಾಂಗ್ ಬೋಗಿ ಒಳಗೊಂಡಿದೆ.