ದಾವಣಗೆರೆ ಜಿಲ್ಲಾದ್ಯಂತ ಕೃಪೆ ತೋರಿದ ವರುಣ: ಕೃಷಿ ಚಟುವಟಿಕೆಗಳು ಚುರುಕು

ದಾವಣಗೆರೆ: ಕಳೆದ ಹಲವು ದಿನಗಳಿಂದ ನಿರಾಶೆ ಮಾಡಿದ್ದ ವರುಣ ಇದೀಗ ಕೃಪೆ ತೋರತೊಡಗಿದ್ದಾನೆ. ಆಗಸದಲ್ಲಿ ಕೆಲ ದಿನಗಳಿಂದ ಮಳೆಯ ಮೋಡಗಳು ಓಡುತ್ತಿದ್ದವಾದರೂ, ಮಳೆ ಸುರಿಸುತ್ತಿರಲಿಲ್ಲ.
`ಎಲ್ಲಿ ಓಡುವಿರಿ ನಿಲ್ಲಿ ಮೋಡಗಳೇ ನಾಲ್ಕು ಹನಿಯ ಚೆಲ್ಲಿ’ ಎಂಬ ಕವಿತೆಯ ಸಾಲುಗಳು ಪದೇ ಪದೇ ನೆನಪಾಗುತ್ತಿದ್ದುದಂತೂ ಸತ್ಯ. ಇಷ್ಟೊತ್ತಿಗೆ ರಾಗಿ, ಮೆಕ್ಕೆಜೋಳ ಸೇರಿದಂತೆ ಖುಷ್ಕಿ ಭೂಮಿಯಲ್ಲಿ ಬಿತ್ತನೆಯಾಗಬೇಕಾಗಿತ್ತು. ಆದರೆ ಮಳೆ ಬಾರದ ಪರಿಣಾಮ ರೈತ ಆಗಸದತ್ತ ಮುಖ ಮಾಡಿ ನಿಂತಿದ್ದ. ಆದರೆ ಕೊನೆಗೂ ವರುಣ ದೇವ ಕೃಪೆ ಮಾಡಿದ್ದು.
ಗುರುವಾರ ಬೆಳಿಗ್ಗೆಯಿಂದಲೇ ದಾವಣಗೆರೆ ಜಿಲ್ಲಾದ್ಯಂತ ತುಂತುರು ಮಳೆ ಆರಂಭವಾಗಿದ್ದು. ಮಧ್ಯಾಹ್ನದ ಹೊತ್ತಿಗೆ ಉತ್ತಮ ಮಳೆಯಾಗುತ್ತಿದೆ. ರೈತರ ಮುಖದಲ್ಲಿ ಮಂದಹಾಸ ಮೂಡಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿವೆ. ಪ್ರಸ್ತುತ ಶೇ.10ರಷ್ಟು ಮಾತ್ರ ಬಿತ್ತನೆಯಾಗಿದೆ. ಜಿಲ್ಲೆಯ ಕೆಲ ಭಾಗಗಳಲ್ಲಿ ತಿಂಗಳ ಮೊದಲು ಬಿತ್ತಿದ ಬೆಳೆಗಳು ತೇವಾಂಶ ಕೊರತೆ ಎದುರಿಸುತ್ತಿದ್ದು, ಬೆಳೆಗಳ ಉಳಿಸಿಕೊಳ್ಳಲು ರೈತರು ಕೊಳವೆ ಬಾವಿಗಳ ಆಶ್ರಯಿಸಿದ್ದರು. ಮಳೆಯಾಗದ ಪರಿಣಾಮ ಕಳೆದೊಂದು ತಿಂಗಳಿನಿಂದ ರೈತರು ದಾವಣಗೆರೆ ನಗರದತ್ತ ಮುಖ ಮಾಡಿರಲಿಲ್ಲ. ಪರಿಣಾಮ ಬೀಜ ಗೊಬ್ಬರದ ಅಂಗಡಿಗಳು ಬಿಕೋ ಎನ್ನುತ್ತಿದ್ದವು. ವ್ಯಾಪಾರಸ್ಥರ ಮುಖದಲ್ಲಿ ಆತಂಕದ ಛಾಯೆ ಮೂಡಿತ್ತು. ಇದೀಗ ಅವರೂ ಸಂತಸಗೊಂಡಿದ್ದಾರೆ.
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗಕೃಷಿ 41,132 ಕ್ವಿಂಟಾಲ್ ಬಿತ್ತನೆ ಬೀಜದ ಬೇಡಿಕೆಯಿದ್ದು, 42,607 ಕ್ವಿಂಟಾಲ್ ಬಿತ್ತನೆ ಬೀಜ ದಾಸ್ತಾನು ಮಾಡಿಕೊಳ್ಳಲಾಗಿದೆ. ಜೂನ್ ಅಂತ್ಯದವರೆಗೆ 29,480 ಮೆಟ್ರಕ್ ಟನ್ ರಸಗೊಬ್ಬರಕ್ಕೆ ಬೇಡಿಕೆಯಿದ್ದು, 42,089 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಇದೆ ಎಂದು ಕೃಷಿ ಇಲಾಖೆ ತಿಳಿಸಿದೆ.
ಈಗ ಮುಂಗಾರು ಚುರುಕುಗೊಂಡಿದ್ದು, ಜುಲೈ ಅಂತ್ಯದವರೆಗೂ ಬಿತ್ತನೆಗೆ ಅವಕಾಶವಿದೆ. ಇನ್ನು ಮುಂದೆ ಗಟ್ಟಿ ಮಳೆಯಾಗುವ ಸಂಭವವಿದ್ದು, ಬಿತ್ತನೆಯ ಗುರಿ ಸಾಧಿಸುವ ವಿಶ್ವಾಸದಲ್ಲಿ ಕೃ ಅಧಿಕಾರಿಗಳಿದ್ದಾರೆ.