ರಾಜಕಾರಣಿಗಳು ,ಅಧಿಕಾರಿಗಳ ವಿರುದ್ಧ ನ್ಯಾಯಾಂಗ ತನಿಖೆಗೆ ಕಟ್ಟಡ ಕಾರ್ಮಿಕರ ಆಗ್ರಹ
ದಾವಣಗೆರೆ: ಕಾರ್ಮಿಕ ಕಲ್ಯಾಣ ಮಂಡಳಿಯ ನೂರಾರು ಕೋಟಿ ಹಣವನ್ನು ದುರುಪಯೋಗ ಮಾಡಿಕೊಂಡು ಕಾರ್ಮಿಕರಿಗೆ ಅನ್ಯಾಯ ಮಾಡಿರುವ ತಪ್ಪಿತಸ್ಥರ ವಿರುದ್ಧ ರಾಜ್ಯದ ಮುಖ್ಯಮಂತ್ರಿಗಳು ಖುದ್ದಾಗಿ ಪರಿಶೀಲನೆ ಮಾಡಿ ನ್ಯಾಯಾಂಗ ತನಿಖೆ ನಡೆಸಿ, ತಪಿತಸ್ಥ ರಾಜಕಾರಿಣಿಗಳು ಮತ್ತು ಅಧಿಕಾರಿಗಳ ವಿರುದ್ಧ ಕಾನೂನು ರೀತಿ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘವು ದಾವಣಗೆರೆಯಲ್ಲಿ ಪ್ರತಿಭಟನೆ ನಡೆಸಿತು.
ನಗರದ ಅಶೋಕ ರಸ್ತೆಯಲ್ಲಿರುವ ಪಂಪಾಪತಿ ಭವನದಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಉಪ ವಿಭಾಗಾಧಿಕಾರಿ ಕಚೇರಿ ತಲುಪಿ ಮನವಿ ಸಲ್ಲಿಸಿ ಸರ್ಕಾರದ ಗಮನ ಸೆಳೆಯಿತು.
ಇದೇ ವೇಳೆ ಮಾತನಾಡಿದ ಪ್ರತಿಭಟನಾಕಾರರು , ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಕುಟುಂಬವನ್ನು ಒಳಗೊಂಡಂತೆ ಇಎಸ್ಐ. ಮತ್ತು ಇಪಿಎಫ್ ಹಾಗೂ ನೊಂದಾವನೆಗೊಂಡ ಕಟ್ಟಡ ಕಾರ್ಮಿಕರು ಯಾವುದೇ ರೀತಿ ಸಾವು ಸಂಭವಿಸಿದರೂ ತುಂಬಲಾರದ ನಷ್ಟ ಅಥವಾ ಸ್ವಾಭಾವಿಕವಾಗಲೀ ಅಥವಾ ರ್ದುಘಟನೆಯಿಂದಾಗಲಿ ಸಾವು ಸಂಭವಿಸಿದರೆ 10 ಲಕ್ಷ ರೂ.ಗಳನ್ನು ಅವಲಂಬಿತ ಕುಟುಂಬಕ್ಕೆ ಮಂಜೂರು ಮಾಡಬೇಕು ಎಂದರು.
ನಿವೃತ್ತಿ ವೇತನ ಪಡೆಯುತ್ತಿರುವ ಕಟ್ಟಡ ಕಾರ್ಮಿಕರು ಮೃತ ಹೊಂದಿದರೆ ಅವರ ಅವಲಂಭಿತ ಕುಟುಂಬಕ್ಕೆ ಕನಿಷ್ಟ 5 ಲಕ್ಷ ರೂ.ಕೊಡಬೇಕು. ಕಲ್ಯಾಣ ಮಂಡಳಿಯಲ್ಲಿ ನೊಂದಣೆಗೊಂಡ ಕಾರ್ಮಿಕ ಸಂಖ್ಯೆ 27 ಲಕ್ಷವೆಂದು ಮಾಹಿತಿ ನೀಡಿರುತ್ತಾರೆ. ನಮ್ಮಗಳ ಸಂಘಟನೆ ಸಮೀಕ್ಷೆ ಪ್ರಕಾರ 15 ರಿಂದ 16 ಲಕ್ಷ ಇರಬಹುದೆಂದು ಅಂದಾಜಿಸಲಾಗಿದ್ದು , ಈ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಉನ್ನತಮಟ್ಟದ ತನಿಖೆ ಮಾಡಿ ಬೋಗಸ್ ಕಾರ್ಡುಗಳು ಮಾಡಿಕೊಟ್ಟಂತಹ ಅಧಿಕಾರಿಗಳು ಹಾಗು ಸಿಎಸ್ಇ ಸೆಂಟರ್‌ಗಳ ಮಾಲೀಕರ ಮೇಲೆ ಕಾನೂನು ರೀತಿ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ರಾಜ್ಯಾದ್ಯಂತ ನೀಡಿರುವ ಫುಡ್ ಕಿಟ್ , ಟೂಲ್ಕಿಟ್ , ಸೆಪ್ಟಿ ಕಿಟ್ ಗಳನ್ನು ಇಡೀ ರಾಜ್ಯಾದ್ಯಾಂತ ಎಷ್ಟು ಫಲಾನುಭವಿಗಳಿಗೆ ನೀಡಿರುತ್ತೀರಿ ಇದಕ್ಕೆ ತಗಲಿರುವ ವೆಚ್ಚದ ಲಿಖಿತ ಮಾಹಿತಿಯನ್ನು ನೀಡಬೇಕು. ರಾಜ್ಯಾದ್ಯಂತ ಕಾರ್ಮಿಕ ಇಲಾಖೆಯಲ್ಲಿ ಸರ್ಕಲ್ ಮಟ್ಟದ ಕಾರ್ಮಿಕ ನಿರೀಕ್ಷಕರ ಹುದ್ದೆ ಜಿಲ್ಲಾವಾರು ಸಾಕಷ್ಟು ಖಾಲಿ ಇದ್ದು , ಈ ಕೂಡಲೇ ಭರ್ತಿ ಮಾಡುವುದರ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು.
2018-19 , 2019-20 , 2020-21 ನೇ ಸಾಲಿನಲ್ಲಿ ವಿವಿಧ ಸಹಾಯಧನದ ಲಕ್ಷಾಂತರ ಅರ್ಜಿಗಳು ಬಾಕಿಗಳು ಇದ್ದು , ಇವುಗಳನ್ನು ಕೂಡಲೇ ವಿಲೇವಾರಿ ಮಾಡಬೇಕು. ಕೋವಿಡ್ -19 ಪರಿಹಾರ 2020-21ರ ಪರಿಹಾರ 5000 ಮತ್ತು 3000 ರೂ.ಗಳು ಬಹಳ ಫಲಾನುಭವಿಗಳ ಖಾತೆಗೆ ಬಂದಿರುವುದಿಲ್ಲ . ಇದರ ಬಗ್ಗೆ ಪುನರ್ ಪರಿಶೀಲನಾ ಮಾಡಿ ಬಾಕಿ ಇರುವ ಅರ್ಜಿಗಳಿಗೆ ಹಣ ಸಂದಾಯ ಮಾಡಬೇಕು ಎಂದರು.
40 ವರ್ಷ ಮೇಲ್ಪಟ್ಟ ನೋಂದಣಿಗೊಂಡ ಕಾರ್ಮಿಕರಿಗೆ ಶಕ್ತಿದಾಯಕ ಆಯುರ್ವೇದಿಕ್ ಪೌಡರ್‌ನ್ನು ವಿತರಣೆ ಮಾಡುವ ತಯಾರಿ ನಡೆಸಿದ್ದು , ಈ ಆದೇಶವನ್ನು ಕೂಡಲೇ ತಡೆಹಿಡಿದು , ಇದನ್ನು ರಾಜ್ಯ ಸರ್ಕಾರದ ಆರೋಗ್ಯ ಇಲಾಖೆಯಲ್ಲಿ ಪರಿಶೀಲಿಸಿ ಮಂಜೂರಾತಿ ಸರ್ಟಿಫಿಕೇಟ್‌ನ್ನು ನೀಡಿದ್ದಾರೆಯೆ ಎಂದು ಪರಿಶೀಲಿಸಬೇಕು. ಇಂತಹ ಅವೈಜ್ಞಾನಿಕವಾದ ತೀರ್ಮಾನಗಳನ್ನು ಕೈಬಿಟ್ಟು ನೈಜ ಕಟ್ಟಡ ಕಾರ್ಮಿಕರ ಬ್ಯಾಂಕ್ ಖಾತೆಗೆ ಆನ್‌ಲೈನ್ ಮೂಲಕ ಹಣ ಸಂದಾಯ ಮಾಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ವಿ. ಲಕ್ಷ್ಮಣ್, ಪ್ರಧಾನ ಕಾರ್ಯದರ್ಶಿ ಎಚ್.ಜಿ. ಉಮೇಶ್, ಪಿ.ಕೆ.ಲಿಂಗ ರಾಜ್, ಶಿವಕುಮಾರ್ ಡಿ.ಶೆಟ್ಟರ್, ಭೀಮಾರೆಡ್ಡಿ, ನೇತ್ರಾವತಿ, ಐರಣಿ ಚಂದ್ರು, ಯರಗುಟೆ ಸುರೇಶ್, ಎಂ. ಹನುಮಂತಪ್ಪ, ಬಸವಕುಮಾರ, ಮುತ್ತೇಶ್, ನಾಗರಾಜ್, ವೆಂಕಟೇಶ್, ಮುರುಗೇಶ್, ಬಸವರಾಜಪ್ಪ ಸೇರಿದಂತೆ ಇತರರು ಇದ್ದರು