ರಾಷ್ಟ್ರದ ಗೌರವ ಕಾಪಾಡಿದ ಸೈನಿಕನಿಗೆ ದಾವಣಗೆರೆಯಲ್ಲಿ ಗೌರವಾರ್ಥ ಸ್ವಾಗತ
ದಾವಣಗೆರೆ: ದೇಶಕ್ಕಾಗಿ ಪ್ರಾಣವನ್ನೇ ಮುಡುಪಿಟ್ಟು ಸತತ 21 ವರ್ಷಗಳ ಕಾಲ ರಾಷ್ಟ್ರ ರಕ್ಷಣೆಯ ಕಾರ್ಯ ಮಾಡಿದ ತಾಲ್ಲೂಕಿನ ಅಣಜಿ ಗ್ರಾಮದ ಯೋಧ ಅಂಜಿನಪ್ಪ ತಾಯ್ನಡಿಗೆ ಆಗಾಮಿಸುತ್ತಿದ್ದಂತೆ ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ಜನರು ಸಂಭ್ರಮಾಚರಣೆಯಿಂದ ಅವರನ್ನು ಸ್ವಾಗತಿಸಿದರು.
ನಂತರ ತಾಲ್ಲೂಕಿನ ಅಣಜಿ ಗ್ರಾಮದಲ್ಲಿ ಗ್ರಾಮಸ್ಥರು ಅಭಿನಂದನಾ ಸಮಾರಂಭ ಹಮ್ಮಿಕೊಂಡಿದ್ದರು.
ಇದೇ ವೇಳೆ ಯೋಧ ಅಂಜಿನಪ್ಪ ಮಾತನಾಡಿ, ದೇಶಕ್ಕಾಗಿ ಸಲ್ಲಿಸಿದ 21 ವರ್ಷಗಳ ಸೇವಾವಧಿ ನನಗೆ ಸಾಕಷ್ಟು ಸಂತೃಪ್ತಿ ತಂದುಕೊಟ್ಟಿದೆ. ಮಾಜಿ ಪ್ರಧಾನ ಮಂತ್ರಿಗಳಾದ ಮನಮೋಹನ್ ಸಿಂಗ್ ಸೇರಿದಂತೆ ಹಲವರು ಗಣ್ಯರ ಜೊತೆ ಕೆಲಸ ನಿರ್ವಹಿಸಿರುವುದು ಸ್ಮರಣೀಯ ಎಂದರು.
ದೇಶಕ್ಕಾಗಿ ಸೇವೆ ಸಲ್ಲಿಸಿ ಬಂದಿರುವ ತಮಗೆ ಗ್ರಾಮದ ಹಾಗೂ ಜಿಲ್ಲೆಯ ಜನತೆ ಇಷ್ಟೊಂದು ಅದ್ಧೂರಿಯಾಗಿ ಸ್ವಾಗತ ಕೋರಿರುವುದು ಸಂತಸ ತಂದಿದೆ ಎಂದರು.
ಈ ವೇಳೆ ಮಾತನಾಡಿದ ಯೋಧ ಜಗಳೂರು ತಾಲ್ಲೂಕಿನ ಸಿದ್ದಯ್ಯನಕೋಟೆ ನಾಗರಾಜ ಅವರು, ದೇಶದ ವಿಚಾರದಲ್ಲಿ ನಮಗೆ ಗಟ್ಟಿತನದ ನಾಯಕರು ಅವಶ್ಯಕತೆ ಇದೆ. ಕೇಂದ್ರ ಸರ್ಕಾರ ಕಾಶ್ಮೀರದ ವಿಚಾರವಾಗಿ ತೆಗೆದುಕೊಂಡ ಗಟ್ಟಿ ನಿರ್ಧಾರ ನಿಜಕ್ಕೂ ಶ್ಲಾಘನೀಯ. ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರಂತಹ ಗಟ್ಟಿನಾಯಕರ ಅಗತ್ಯ ದೇಶಕ್ಕಿದೆ ಎಂದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ ಮಾತನಾಡಿ, ಯೋಧ ಅಂಜಿನಪ್ಪ ಅವರು 21 ವರ್ಷಗಳ ಕಾಲ ಗಡಿಯಲ್ಲಿ ತನ್ನ ಪ್ರಾಣದ ಹಂಗನ್ನ ತೊರೆದು ಸೇವೆ ಸಲ್ಲಿಸಿದ್ದಾರೆ. ಅವರಿಗೆ ಹಾಗೂ ಅವರ ಕುಟುಂಬದವರಿಗೆ ದೇವರು ಒಳ್ಳೆಯದನ್ನ ಮಾಡಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಇವರ ಜೊತೆ ನಿವೃತ್ತಿಗೊಂಡ ಸೈನಿಕರಾದ ಜಗಳೂರು ತಾಲ್ಲೂಕಿನ ಸಿದ್ದಯ್ಯನಕೋಟೆ ಯೋಧ ನಾಗರಾಜ ಹಾಗೂ ಕೊಡುಗಿನ ಯೋಧ ವಿಲಿಯನ್, ಅಣಜಿ ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಜ್ಯೋತ್ಯಮ್ಮ, ಎಪಿಎಂಸಿ ಅಧ್ಯಕ್ಷ ಎಸ್.ಕೆ. ಚಂದ್ರಣ್ಣ, ಆನಗೋಡ ಜಿಲ್ಲಾ ಪಂಚಾಯ್ತಿ ಸದಸ್ಯರಾದ ಬಸವಂತಪ್ಪ, ಜಿಲ್ಲಾ ಬಿಜೆಪಿ ಪಕ್ಷದ ಉಪಾಧ್ಯಕ್ಷರಾದ ಶ್ರೀನಿವಾಸ ದಾಸಕರಿಯಪ್ಪ, ಫಣಿಯಾಪುರ ಲಿಂಗರಾಜ, ಸೋಮಲಿಂಗಪ್ಪ, ಅಣಜಿ ಮಂಜುನಾಥ, ಗೊಲ್ಲರಹಳ್ಳಿ ಮಂಜು, ಅಣಜಿ ಗುಡ್ದೇಶ್, ಗುಮ್ಮನೂರು ಶಂಭಣ್ಣ, ಲೋಕೆಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.