ಕೆರೆಗೆ ಬಾಗಿಣ ಅರ್ಪಿಸಿದ ರೇಣುಕಾಚಾರ್ಯ : ನೀರನ್ನು ಸಂರಕ್ಷಿಸುವುದು ನಮ್ಮ ಕರ್ತವ್ಯ – ಎಂ ಪಿ ರೇಣುಕಾಚಾರ್ಯ
ಹೊನ್ನಾಳಿ: ಮನುಷ್ಯನಿಗೆ ಗಾಳಿ, ಬೆಳಕು ಎಷ್ಟು ಮುಖ್ಯವೋ ಅದೇ ರೀತಿ ನೀರು ಕೂಡ ಅತ್ಯಮೂಲ್ಯವಾದದ್ದು, ಅದನ್ನು ಸಂರಕ್ಷಿಸ ಬೇಕಾಗಿರುವುದು ಪ್ರತಿಯೊಬ್ಬ ನಾಗರೀಕರ ಕರ್ತವ್ಯ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ತಾಲೂಕಿನ ಅರಬಗಟ್ಟೆ ಗ್ರಾಮದ ಕೆರೆಗೆ ಬಾಗಿಣ ಅರ್ಪಿಸಿ ಮಾತನಾಡಿದ ಶಾಸಕರು, ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಲ್ಲಿ ಜಲಕ್ರಾಂತಿ ಮಾಡುವ ನಿಟ್ಟಿನಲ್ಲಿ ಅವಳಿ ತಾಲೂಕಿನ ಪ್ರತಿಯೊಂದು ಕೆರೆಗಳನ್ನು ತುಂಬಿಸಲಾಗುವುದು ಎಂದರು.
ಅರಬಗಟ್ಟೆಯ ಕೆರೆಯನ್ನು ಲಕ್ಷಾಂತರ ರು., ವೆಚ್ಚದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಹೂಳೆತ್ತಿದ್ದು ಇದೀಗ ಕೆರೆಯ ತುಂಬೆಲ್ಲಾ ನೀರು ಸಂಗ್ರಹವಾಗಲು ಅನುಕೂಲವಾಗಿದೆ. ಕೆರೆ ಭರ್ತಿಯಾದ ಹಿನ್ನೆಲೆಯಲ್ಲಿ ಇದೀಗ ಸುತ್ತಮುತ್ತಲ ಕೊಳವೆ ಬಾವಿಗಳಿಗೂ ಅನುಕೂಲವಾಗಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ ಎಂದರು.
ಇದೀಗ ೫೧೮ ಕೋಟಿ ರು., ವೆಚ್ಚದಲ್ಲಿ ಅವಳಿ ತಾಲೂಕಿನ ಕೆರೆಗಳನ್ನು ತುಂಬಿಸುವ ಯೋಜನೆಗೆ ಚಾಲನೆ ದೊರೆತಿದ್ದು, ಮುಂದಿನ ದಿನಗಳಲ್ಲಿ ಈ ಭಾಗದ ಕೆರೆಗಳನ್ನು ತುಂಬಿಸಲಾಗುವುದು. ಕೆರೆಗಳನ್ನು ತುಂಬಿಸುವ ಯೋಜನೆಯ ಜೊತೆಗೆ ಕೆರೆಗಳ ಅಭಿವೃದ್ದಿಗೂ ೭೦ ಕೋಟಿ ಹಣ ಮೀಸಲಿಡಲಾಗಿದೆ ಎಂದ ರೇಣುಕಾಚಾರ್ಯ ಸದ್ಯದರಲ್ಲೇ ಟೆಂಡರ್ ಆಗಲಿದೆ ಎಂದು ಹೇಳಿದರು.
ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಸದಸ್ಯರು ಸೇರಿದಂತೆ ಗ್ರಾಮದ ಮುಖಂಡರು, ಗ್ರಾಮಸ್ಥರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳಿದ್ದರು.