ರೇಣುಕಾಚಾರ್ಯರ ಕಾಳಜಿಗೆ ಫ್ಯಾನ್ಸ್ ಗಳು ಫಿದಾ:ರಕ್ಷಾಬಂಧನದ ಶುಭಾಶಯ ಕೋರಿ ಸೆಲ್ಫಿಗೆ ಪೋಸ್
ದಾವಣಗೆರೆ: ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯರ ಔದಾರ್ಯ, ಕಾಳಜಿಯ ಗುಣಕ್ಕೆ ದಿನೇ ದಿನೇ ಫ್ಯಾನ್ಸ್ ಗಳು ಹೆಚ್ಚಾಗುತ್ತಲೇ ಇದ್ದಾರೆ. ಕರೋನಾ ಸಂದರ್ಭದಲ್ಲಿ ಕೋವಿಡ್ ಕೇರ್ ಸೆಂಟರ್ ನಲ್ಲಿಯೇ ವಾಸ್ತವ್ಯ ಹೂಡಿ ರೋಗಿಗಳಿಗೆ ಆತ್ಮಸ್ಥೈರ್ಯ ತುಂಬಿದ್ದಷ್ಟೇ ಅಲ್ಲದೇ, ಬಗೆಬಗೆಯ ಪೌಷ್ಠಿಕಾಂಶಯುಕ್ತ ಊಟವನ್ನು ಕೊಟ್ಟು, ಯೋಗ ಹೇಳಿಕೊಟ್ಟು ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದ ರೇಣುಕಾಚಾರ್ಯ ಅವರ ಕಾರ್ಯವೈಖರಿ ಮತ್ತು ತಮ್ಮ ಕ್ಷೇತ್ರದ ಜನತೆಯ ಬಗ್ಗೆ ಅವರಿಗಿದ್ದ ಕಾಳಜಿ ಕಂಡು ಹೊರ ರಾಜ್ಯ ಅಷ್ಟೇ ಯಾಕೆ ಹೊರ ರಾಷ್ಟ್ರಗಳ ಜನರು ಫಿದಾ ಆಗಿದ್ದರು. ಅಭಿನಂದನೆಯ ಸುರಿಮಳೆಯನ್ನೇ ಸುರಿಸಿದ್ದರು.
ಅದರಂತೆ ರೇಣುಕಾಚಾರ್ಯ ಹೋದಲ್ಲಿ ಬಂದಲ್ಲಿ ಅವರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಅಭಿಮಾನಿಗಳ ದಂಡು ದೊಡ್ಡದಾಗುತ್ತಲೇ ಇದೆ. ಅದರಲ್ಲಿ ಮಹಿಳೆಯರೇ ಹೆಚ್ಚು ಎಂದರೆ ಅದು ಅತಿಶಯೋಕ್ತಿಯೇನಲ್ಲ. ಅದಕ್ಕೆ ಉದಾಹರಣೆ ಎಂದರೆ ಹೊನ್ನಾಳಿ ನಗರದ ಶ್ರೀ ಚನ್ನಪ್ಪಸ್ವಾಮಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ ಹಾಗೂ ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಹಯೋಗದಲ್ಲಿ ಸ್ತ್ರೀ ಶಕ್ತಿ ಸ್ವ-ಸಹಾಯ ಸಂಘಗಳಿಗೆ ಕಿರು ಉದ್ಯಮ ಸಾಲ ಹಾಗೂ ಸಮುದಾಯ ಬಂಡವಾಳ ನಿಧಿ ಚೆಕ್ ವಿತರಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಆ ಕಾರ್ಯಕ್ರಮದಲ್ಲಿ ಸಂಸದ ಜಿ.ಎಂ ಸಿದ್ದೇಶ್ವರ್ ಅವರೂ ಪಾಲ್ಗೊಂಡಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಚೆಕ್ ವಿತರಿಸಲಾಯಿತು. ನಂತರ ರೇಣುಕಾಚಾರ್ಯ ವೇದಿಕೆ ಇಳಿದು ಬರುತ್ತಿದ್ದಂತೆ ಮಹಿಳೆಯರ ದಂಡು ರೇಣುಕಾಚಾರ್ಯ ಜತೆಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದಿತು. ರೇಣುಕಾಚಾರ್ಯ ಕೂಡ ಕೆಲ ಕಾಲ ಗಲಿಬಿಲಿಗೊಂಡರು.
ನಂತರ ಅವರೇ ರಕ್ಷಾಬಂಧನದ ಶುಭಾಶಯ ಕೋರಿ ಎಲ್ಲರ ಜತೆಗೆ ನಗುಮೊಗದಿಂದಲೇ ಫೋಟೊಗೆ ಫೋಸ್ ಕೊಟ್ಟರು. ಆದರೆ, ಕರೋನಾದ ಯಾವ ಮಾರ್ಗಸೂಚಿಯಂತೂ ಮೂಲೆ ಸೇರಿತ್ತು.