ಸಮಾನತೆಗಾಗಿ ಮಹಿಳೆಗೆ ಪ್ರಾತಿನಿಧ್ಯ ಅವಶ್ಯಕ: ಡಾ|| ಟಿ.ಕೆ. ಅನುರಾಧ
ದಾವಣಗೆರೆ: ಸಮಾಜದಲ್ಲಿ ಮಹಿಳೆಗೆ ಸಲ್ಲಬೇಕಾದ ಗೌರವ ಮತ್ತು ಸಮಾನತೆ ದೊರೆಯಬೇಕಾದರೆ, ಎಲ್ಲಾ ರಂಗಗಳಲ್ಲೂ ಮಹಿಳೆಗೆ ಪ್ರಾತಿನಿಧ್ಯ ಅವಶ್ಯಕ ಎಂದು ಇಸ್ರೋ ವಿಜ್ಞಾನಿ ಡಾ|| ಟಿ.ಕೆ. ಅನುರಾಧ ಹೇಳಿದರು. ನಗರದ ಬಿಐಇಟಿ ಕಾಲೇಜಿನಲ್ಲಿ ‘ಸುಸ್ಥಿರ ನಾಳೆಗಾಗಿ ಇಂದು ಲಿಂಗ ಸಮಾನತೆ’ ಎಂಬ ಘೋಷವಾಕ್ಯದೊಂದಿಗೆ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಮೊದಲಿಗಿಂತಲೂ ಈಗ ಕೆಲವು ರಂಗಗಳಲ್ಲಿ ಮಹಿಳೆಗೆ ಸಮಾನತೆ ಸಿಗುತ್ತಿದ್ದರೂ, ಎಲ್ಲಾ ರಂಗಗಳಲ್ಲಿ ಇನ್ನೂ ಮಹಿಳೆಗೆ ಸಮಾನತೆ ಸಿಗಬೇಕಾಗಿದೆ ಎಂದು ಅಭಿಪ್ರಾಯ ಪಟ್ಟರು.
ಮತ್ತೋರ್ವ ಮುಖ್ಯ ಅತಿಥಿಯಾದ ಬಾಪೂಜಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಡಾ|| ಪ್ರಭಾ ಮಲ್ಲಿಕಾರ್ಜುನ ಮಾತನಾಡಿ, ಡಾ|| ಅನುರಾಧ ಒಬ್ಬ ಶ್ರೇಷ್ಠ ವಿಜ್ಞಾನಿಯಾಗಿದ್ದು, ವಿದ್ಯಾರ್ಥಿಗಳು ಅವರಿಂದ ಬಹಳ ಕಲಿಯಬೇಕಿದೆ ಎಂದು ಹೇಳಿದರು. ಬಾಪೂಜಿ ವಿದ್ಯಾಸಂಸ್ಥೆಯ ಉಪಾಧ್ಯಕ್ಷರಾದ ಕಿರುವಾಡಿ ಗಿರಿಜಮ್ಮ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಮೌಲ್ಯಮಾಪನಾ ಕುಲಸಚಿವರಾದ ಡಾ|| ರಂಗಸ್ವಾಮಿ, ಬಿ.ಇ.ಎಲ್ ನ ನಿವೃತ್ತ ಪ್ರಧಾನ ವ್ಯವಸ್ಥಾಪಕ ಕಿರಣ ವಿಶ್ವೇಶ್ವರಯ್ಯ, ಕಾಲೇಜಿನ ನಿರ್ದೇಶಕರಾದ ಪ್ರೊ. ವೈ. ವೃಷಭೇಂದ್ರಪ್ಪ ಹಾಗೂ ಪ್ರಾಂಶುಪಾಲ ಡಾ|| ಎಚ್.ಬಿ. ಅರವಿಂದ ಉಪಸ್ಥಿತರಿದ್ದರು.