ಎಲ್ಲಾ ಕ್ಷೇತ್ರಗಳಲ್ಲೂ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಸ್ಪರ್ಧೆ

ದಾವಣಗೆರೆ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಸ್ಪರ್ಧಿಸಲಿದೆ ಎಂದು ರಾಷ್ಟ್ರೀಯ ಅಧ್ಯಕ್ಷ ಡಾ.ಎನ್. ಮೂರ್ತಿ ಹೇಳಿದರು.
ಭಾನುವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸುತ್ತಾ, ಬೆಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಈ ಮೂರು ಪಕ್ಷಗಳದ್ದೂ ಒಂದೇ ಸಿದ್ಧಂತವಾಗಿದೆ. ಬಡವರಿಗೆ ಸ್ಪಂದಿಸದ ಈ ಮೂರೂ ಪಕ್ಷಗಳನ್ನು ದೂರ ಇಡಬೇಕಿದೆ ಎಂದು ಕಿಡಿಕಾರಿದರು.
ಜನಾಂದೋಲನ: ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಜಂಟಿ ಆಶ್ರಯದಲ್ಲಿ ರಾಜ್ಯಾದ್ಯಂತ ಸಂವಿಧಾನ ರಕ್ಷಿಸಿ ಜನಾಂದೋಲನ ಕಾರ್ಯಕ್ರಮವನ್ನು 2022ರ ನ.22ರಿಂದ 2023 ನ.26ರವರೆಗೆ ಹಮ್ಮಿಕೊಂಡಿದೆ.
2ನೇ ಹಂತವಾಗಿ ರಾಜ್ಯದಲ್ಲಿ 2023ರ ಫೆ.6ರಂದು ಗದಗ್ ಜಿಲ್ಲೆಯಿಂದ ಆರಂಗೊಂಡ ಫೆ.14ರವರೆಗೆ 10 ಜಿಲ್ಲಾ ಕೇಂದ್ರಗಳಲ್ಲಿ ಭಾರೀ ಬಹಿರಂಗ ಸಭೆ, ವಿಚಾರ ಸಂಕಿರಣ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮತ ಜಾಗೃತಿ ಹಾಗೂ ಜನ ಜಾಗೃತಿ ಮೂಡಿಸಲಾಗುವುದು ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ದಸಸಂ ರಾಜ್ಯಾಧ್ಯಕ್ಷ ಡಾ.ಎನ್. ಮೂರ್ತಿ ಹೇಳಿದರು.
ಫೆ.19ರಂದು ದಾವಣಗೆರೆಯಲ್ಲಿ ಜನಾಂಲೋದನ ಕಾರ್ಯಕ್ರಮ ಹಮ್ಮಿಕೊಳ್ಳುವ ಚಿಂತನೆ ಇದ್ದು, ಈ ಕುರಿತು ಶೀಘ್ರವೇ ತಿಳಿಸಲಾಗುವುದು ಎಂದರು.
ಸಂವಿಧಾನವೆಂಬ ಮರದ ಬೇರನ್ನು ಒಂದೊಂದೇ ಕಡಿಯುತ್ತಾ, ಸಂವಿಧಾನ ದುರ್ಬಲಗೊಳಿಸುವ ಹುನ್ನಾರ ನಡೆಯುತ್ತಿದೆ. ಮೀಸಲಾತಿಯನ್ನು ರಾಜಕೀಯಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಮೂರ್ತಿ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಅಣ್ಣಪ್ಪ ತಣಿಗೆರೆ, ಪರಶುರಾಮ್, ಸಂತೋಷ್ ಕುಮಾರ್, ಬೈಲಹೊನ್ನಯ್ಯ, ಕೋದಂಡರಾಮ, ರೋಸ್ ಮೇರಿ, ಶ್ರೀನಿವಾಸ್ ಬಿ. ಉಪಸ್ಥಿತರಿದ್ದರು.