ಬೆಸ್ಕಾಂ ನೊಟೀಸ್‌ಗೆ ಬೆಚ್ಚಿದ ರಾಜೇಂದ್ರ ಬಡಾವಣೆ ನಿವಾಸಿಗಳು ಸಮಸ್ಯೆ ಪರಿಹಾರಕ್ಕೆ ಆಗ್ರಹ

ಬೆಸ್ಕಾಂ ನೊಟೀಸ್‌ಗೆ ಬೆಚ್ಚಿದ ರಾಜೇಂದ್ರ
ದಾವಣಗೆರೆ : ಡೋರ್ ನಂಬರ್ ಸೇರಿದಂತೆ ಮಹಾನಗರ ಪಾಲಿಕೆಯಿಂದ ಎಲ್ಲಾ ಸೌಲಭ್ಯ ಪಡೆದು ಮನೆ ಕಟ್ಟಿಸಿಕೊಂಡು 9 ವರ್ಷಗಳಿಂದ ಜೀವನ ನಡೆಸುತ್ತಿರುವ ನಮಗೆ ಇದೀಗ ಬೆಸ್ಕಾಂ ಅಧಿಕಾರಿಗಳು ನೊಟೀಸ್ ನೀಡಿರುವುದು ಆತಂಕ ಮೂಡಿಸಿದೆ ಎಂದು 32ನೇ ವಾರ್ಡ್ ರಾಜೇಂದ್ರ ಬಡಾವಣೆ ನಿವಾಸಿಗಳು ಶನಿವಾರ ಸುದ್ದಿಗೋಷ್ಠಿಯಲ್ಲಿ ಅಳಲು ತೋಡಿಕೊಂಡರು.
ಕೂಲಿ ಕಾರ್ಮಿಕಾರ್ಮಿಕರು, ಬಡವರೇ ವಾಸ ಮಾಡುತ್ತಿರುವ ರಾಜೇಂದ್ರ ಬಡಾವಣೆಯಲ್ಲಿ 20×30ಅಡಿ ಅಳತೆಯ ಮನೆ ನಿರ್ಮಿಸಿಕೊಂಡು ಹಲವು ವರ್ಷಗಳಿಂದ ಜೀವನ ಸಾಗಿಸುತ್ತಿದ್ದೇವೆ. ಸಾಲ ಮಾಡಿ ಮನೆ ಕಟ್ಟಿಕೊಂಡಿದ್ದೇವೆ.
ಈಗಾಗಲೇ ಹಾದು ಹೋಗಿದ್ದ ಹೈ ಟೆನ್ಷನ್ ವೈಯರ್ ಮಾರ್ಪಡಿಸುತ್ತಿರುವ ಬೆಸ್ಕಾಂ ಇಲಾಖೆ ಅಧಿಕಾರಿಗಳು, ಇಲ್ಲಿನ ನಿವಾಸಿಗಳ ಮನೆಗಳ ಪವರ್ ಕಟ್ ಮಾಡುವುದಾಗಿ ನೊಟೀಸ್ ನೀಡಿದ್ದಾರೆ. ಮೊದಲ ಮಹಡಿ ಮನೆಯನ್ನು ತೆಗೆಸುವಂತೆಯೂ ಹೇಳುತ್ತಿದ್ದಾರೆ ಎಂದು ದೂರಿದರು.
ಈಗಾಗಲೇ ನಿರ್ಮಿಸಲಾಗಿರುವ ಮನೆಗಳಿಗೆ ತೊಂದರೆಯಾಗದಂತೆ ಲೈನ್ ಅಳವಡಿಕೆ ಮಾಡಲು ಸೂಚಿಸುವಂತೆ ಶಾಸಕರು, ಸಂಸದರು, ವಿದ್ಯುತ್ ಸಚಿವರು, ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ರಾಜೇಂದ್ರ ಬಡಾವಣೆ ನಿವಾಸಿ ಎನ್.ಬಿ. ನೀಲಕಂಠ ಸ್ವಾಮಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ರಾಜೇದ್ರ ಬಡಾವಣೆ ನಿವಾಸಿಗಳಾದ ಎಸ್.ಕೆ. ವೆಂಕಟೇಶ್, ರಂಗಸ್ವಾಮಿ ಎಸ್., ಸಿದ್ದಬಸಪ್ಪ ರೆಡ್ಡಿ, ರಮೇಶ್, ವೆಂಕಟೇಶ್, ಪಿ.ಕೆ. ರಂಗಪ್ಪ ಇತರರು ಉಪಸ್ಥಿತರಿದ್ದರು.