ಜಡ್ಜ್ ಸ್ಥಾನಕ್ಕೆ ರಾಜೀನಾಮೆ: ಚುನಾವಣೆಗೆ ಎಂಟ್ರಿ ಕೊಟ್ಟ ರಾಠೋಡ

ಜಡ್ಜ್ ಸ್ಥಾನಕ್ಕೆ ರಾಜೀನಾಮೆ
ಕಲಬುರಗಿ : ನ್ಯಾಯಾಧೀಶರೊಬ್ಬರು ಜೆಡಿಎಸ್ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಲು ಬಯಸಿದ್ದು, ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲ್ಲೂಕಿನ ಸಂಕದಾಳ ಗ್ರಾಮದವರಾದ ಸುಭಾಷಚಂದ್ರ ರಾಠೋಡ ಅವರು, ಗದಗ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿದ್ದರು.
ಅವರು ಇದೀಗ ಚಿತ್ತಾಪುರ ಮತಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಬಯಸಿ, ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಜಾತ್ಯತೀತ ತತ್ವ, ಸಿದ್ಧಾಂತಗಳಿಗೆ ಬದ್ಧವಾಗಿದೆ. ಸಮಾಜಮುಖಿ, ಜನಪರ ಕೆಲಸ ಮಾಡಲು ಅವಕಾಶವಿದೆ. ಚಿತ್ತಾಪುರ ಮತಕ್ಷೇತ್ರದ ಪರಿಚಯವಿದೆ. ಜನರ ನಾಡಿಮಿಡಿತ, ಸಮಸ್ಯೆ ಅರಿತಿರುವೆ. ಹೀಗಾಗಿ ಚಿತ್ತಾಪುರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಬಯಸಿದ್ದೇನೆ ಎಂದು ಸುಭಾಷಚಂದ್ರ ತಿಳಿಸಿದ್ದಾರೆ.