ಕಂದಾಯ ದಾಖಲೆ ಮನೆ ಬಾಗಿಲಿಗೆ ಕಾರ್ಯಕ್ರಮಕ್ಕೆ ಮಾರ್ಚ್ 12 ರಂದು ಚಾಲನೆ – ಡಿಸಿ ಮಹಾಂತೇಶ್ ಬೀಳಗಿ

ದಾವಣಗೆರೆ: ಕಂದಾಯ ದಾಖಲೆ ಮನೆ ಬಾಗಿಲಿಗೆ ಯೋಜನೆಗೆ ಮಾರ್ಚ್ 12 ರಂದು ಜಿಲ್ಲೆಯಲ್ಲಿ ಚಾಲನೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ ಅವರು ಚಾಲನೆ ನೀಡಲಿದ್ದಾರೆ. ಉಳಿದಂತೆ ಆಯಾಯ ತಾಲ್ಲೂಕು ಕೇಂದ್ರಗಳಲ್ಲಿ ಶಾಸಕರು ಚಾಲನೆ ನೀಡಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮಹಾತ್ವಕಾಂಕ್ಷೆ ಯೋಜನೆ ಇದಾಗಿದ್ದು, ಕಂದಾಯ ಸಚಿವ ಆರ್. ಅಶೋಕ್ ಅವರ ಕನಸಾಗಿದೆ. ಕಂದಾಯ ದಾಖಲೆಗಳನ್ನು ಸಂಬಂಧಿಸಿದ ಎಲ್ಲರ ಮನೆಗಳಿಗೆ ತಲುಪಿಸುವುದು ಯೋಜನೆಯ ಉದ್ದೇಶ ಹೊಂದಲಾಗಿದೆ. ಕಂದಾಯ ಇಲಾಖೆಯ ವತಿಯಿಂದ ಸರ‍್ವಜನಿಕರಿಗೆ ನೀಡುವ ಮೂಲ ದಾಖಲೆಗಳಾದ ಪಹಣಿ, ಆದಾಯ/ಜಾತಿ ಪ್ರಮಾಣ ಪತ್ರ ಮತ್ತು ಅಟ್ಲಾಸ್‍ಗಳನ್ನು ರೈತರ ಮನೆ ಬಾಗಿಲೆಗೆ ಉಚಿತವಾಗಿ ತಲುಪಿಸಲಾಗುವುದು ಎಂದು ಹೇಳಿದರು.
ಈ ಯೋಜನೆಯಡಿ ಜಿಲ್ಲೆಯ 1.35 ಲಕ್ಷ ರೈತ ಕುಟುಂಬಗಳನ್ನು ಗುರುತಿಸಲಾಗಿದೆ. ಈ ರೈತ ಕುಟುಂಬಗಳಿಗೆ ಅವರಿಗೆ ಕಂದಾಯ ದಾಖಲೆಗಳನ್ನು ನೀಡಲಾಗುವುದು. ಒಟ್ಟಾರೆ 2.93 ಲಕ್ಷ ಪಹಣಿ, 3.23 ಲಕ್ಷ ಆದಾಯ ಮತ್ತು ಜಾತಿ ಪ್ರಮಾಣ ಪತ್ರ, 93 ಸಾವಿರ ಅಟ್ಲಾಸ್ ಸೇರಿದಂತೆ 7.10 ಲಕ್ಷ sದಾಖಲೆಗಳನ್ನು ವಿತರಿಸಲಾಗುವುದು. ಅದೇ ದಿನದಂದು ಪತ್ರಗಳನ್ನು ಪಡೆಯಲು ಸಾಧ್ಯವಾಗದಿದ್ದವರು, ಮಾ.21ರಿಂದ 26ರ ನಡುವಿನ ವಾರದಲ್ಲಿ ನಾಡಕಚೇರಿಯಲ್ಲಿ ಉಚಿತವಾಗಿ ಪತ್ರಗಳನ್ನು ಪಡೆಯಬಹುದು. ತಹಶೀಲ್ದಾರರು, ಉಪ ತಹಶೀಲ್ದಾರರು, ರಾಜಸ್ವ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ಗ್ರಾಮ ಸಹಾಯಕ ಸಿಬ್ಬಂದಿಗಳ ಮೂಲಕ ದಾಖಲೆಗಳನ್ನು ವಿತರಿಸಲಾಗುವುದು ಎಂದು ಹೇಳಿದರು.
ಕೊರೊನಾ ನಂತರ ಸ್ಥಗಿತಗೊಳಿಸಲಾಗಿದ್ದ ಜನಸ್ಪಂದನ ಕಾರ್ಯಕ್ರಮವನ್ನು ಮಾ.17ರಿಂದ ಪುನರಾರಂಭಿಸಲಾಗುವುದು. ಹದಿನೈದು ದಿನಗಳಿಗೊಮ್ಮೆ ಜನಸ್ಪಂದನ ನಡೆಯಲಿದೆ. ಅರ್ಜಿಗಳ ವಿಲೇವಾರಿ ಬಗ್ಗೆ ನಿರಂತರ ಪರಿಶೀಲನೆ ಮಾಡಲಾಗುವುದು. ಅಡುಗೆ ಎಣ್ಣೆ ಕೃತಕ ಅಭಾವ ಸೃಷ್ಟಿಯಾಗಬಾರದು ಎಂದು ಆಹಾರ ಇಲಾಖೆ ಅಧಿಕಾರಿಗಳು ಗೋದಾಮುಗಳ ತಪಾಸಣೆ ನಡೆಸುವಂತೆ ಸೂಚನೆ ನೀಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸುಶ್ರುತ್ ಶಾಸ್ತ್ರಿ ಉಪಸ್ಥಿತರಿದ್ದರು.