ಮಣ್ಣಿನ ಫಲವತ್ತತೆ ಹೆಚ್ಚಿಸುವಲ್ಲಿ ಹಸಿರೆಲೆ ಗೊಬ್ಬರದ‌ ಪಾತ್ರ

ದಾವಣಗೆರೆ :ಅತಿಯಾದ ರಸಗೊಬ್ಬರ ಹಾಗೂ ಪೀಡೆನಾಶಕಗಳ ಬಳಕೆಯಿಂದ ನೈಸರ್ಗಿಕ ಸಂಪನ್ಮೂಲಗಳಾದ ಮಣ್ಣು, ನೀರು,‌ ನಮ್ಮ ಸುತ್ತಮುತ್ತಲಿನ ವಾತಾವರಣ, ಸಸ್ಯ ಮತ್ತು ಪ್ರಾಣಿ ಸಂಕುಲಗಳು ಮಲಿನಗೊಳ್ಳುವುದರ ಜೊತೆಗೆ ಭೂಮಿಯ ಭೌತಿಕ, ರಾಸಾಯನಿಕ ಹಾಗೂ ಜೈವಿಕ ಗುಣ ಧರ್ಮಗಳು ಕ್ಷೀಣಿಸುತ್ತಿದ್ದು, ಮಣ್ಣಿನ ಫಲವತ್ತತೆ ಮತ್ತು ಉತ್ಪಾದಕತೆ ಕುಂಠಿತಗೊಳ್ಳುತ್ತಿದೆ. ರಾಸಾಯನಿಕ ವಸ್ತುಗಳ ಬಳಕೆಯಿಂದ ಬರಡಾಗುತ್ತಿರುವ ಭೂಮಿಗೆ ಚೈತನ್ಯ ತುಂಬಲು ಮಣ್ಣಿನಲ್ಲಿ ಸಾವಯವ ಅಂಶ ಹೆಚ್ಚಿಸುವುದು ಅಗತ್ಯ ಮತ್ತು ಅನಿವಾರ್ಯ. ಈ ನಿಟ್ಟಿನಲ್ಲಿ ಹಸಿರಲೆ ಗೊಬ್ಬರಗಳು ಬಹುಮುಖ್ಯ ಪಾತ್ರವಹಿಸುತ್ತದೆ.

 

ಹಸಿರೆಲೆ ಗೊಬ್ಬರದ ಮಹತ್ವ:

ಕೃಷಿಯಲ್ಲಿ ಹಸಿರೆಲೆ ಗೊಬ್ಬರಗಳ ಬಳಕೆ ಮಣ್ಣಿನ ಫಲವತ್ತತೆ ಮತ್ತು ಭೌತಿಕ ಗುಣಧರ್ಮಗಳನ್ನು ಕಾಪಾಡುವಲ್ಲಿ ಬಹಳ ಪರಿಣಾಮಕಾರಿಯಾದ ಪದ್ಧತಿ. ಆದರೆ, ಕೃಷಿಯಲ್ಲಿ ರಾಸಾಯನಿಕ ಗೊಬ್ಬರಗಳ ಉಪಯೋಗ ಅಧಿಕವಾಗುತ್ತಾ ಹೋದಂತೆ, ಹಸಿರೆಲೆ ಗೊಬ್ಬರಗಳ ಉಪಯೋಗದ ಪ್ರಮಾಣ ಕಡಿಮೆಯಾಗುತ್ತಿದೆ. ರಸಗೊಬ್ಬರಗಳ ಬೆಲೆ ಅಧಿಕವಾಗುತ್ತಿರುವ ಈ ಕಾಲದಲ್ಲಿ ಸುಲಭ ಮತ್ತು ಅಗ್ಗವಾಗಿ ಒದಗುತ್ತಿರುವ ಮತ್ತು ಉಪಯೋಗಿಸಬಹುದಾದ ಹಸಿರೆಲೆ ಗೊಬ್ಬರಗಳ ಬಗ್ಗೆ ಗಮನಹರಿಸುವುದು ಅವಶ್ಯಕ.

ಉತ್ಪಾದನೆ ಮತ್ತು ಬಳಕೆ:

ಹಸಿರೆಲೆ ಬೆಳೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೂ ಬಿಡುವುದಕ್ಕಿಂತ ಮುಂಚೆ ಮಣ್ಣಿನೊಳಗೆ ಸೇರಿಸಬೇಕು. ಇಲ್ಲವಾದಲ್ಲಿ ಕಾಂಡದಲ್ಲಿ ನಾರಿನಂಶ ಹೆಚ್ಚಾಗಿ ಕಳೆಯುವಿಕೆ ಸಮಯ ಹೆಚ್ಚಾಗುತ್ತದೆ.ಈ ಬೆಳೆಗಳನ್ನು ಬೆಳೆದಾಗ ಅವುಗಳ ಬೇರುಗಳ ಗಂಟುಗಳಲ್ಲಿ ಸಾರಜನಕ ಸ್ಥೀರಿಕರಣವಾಗುತ್ತದೆ. ನಂತರ ಸಂಗ್ರಹವಾದ ಸಾರಜನಕ ಅಂಶ ಮಣ್ಣಿನಲ್ಲಿ ಬೆರೆತು ಫಲವತ್ತತೆಯನ್ನು ಹೆಚ್ಚಿಸುತ್ತದೆ.

ಹಸಿರೆಲೆ ಗೊಬ್ಬರದ ವಿಧಾನಗಳು:

ಜಮೀನುಗಳಲ್ಲಿ ಹಸಿರು ಗೊಬ್ಬರದ ಬೀಜಗಳನ್ನು ಬಿತ್ತನೆ ಮಾಡುವುದಕ್ಕೆ ಮುಂಚಿತವಾಗಿ ಸಾವಯವ ಗೊಬ್ಬರಗಳನ್ನು ಭೂಮಿಗೆ ಸೇರಿಸಬೇಕು. ಭೂಮಿಗೆ ಶಿಲಾ ರಂಜಕ ಗೊಬ್ಬರಗಳನ್ನು ಸೇರಿಸುವುದರಿಂದ ದ್ವಿದಳ ಧಾನ್ಯ ವರ್ಗಕ್ಕೆ ಸೇರಿದ ಹಸಿರು ಗೊಬ್ಬರದ ಗಿಡಗಳ ಬೇರುಗಳಲ್ಲಿ ಗಂಟುಗಳು ವೃದ್ಧಿಸಿ, ವಾತಾವರಣದಲ್ಲಿರುವ ಸಾರಜನಕವನ್ನು ಮಣ್ಣಿನಲ್ಲಿ ಸ್ಥಿರೀಕರಿಸುತ್ತವೆ ಹಾಗೂ ಬೆಳವಣಿಗೆ ಕೂಡ ವೃದ್ಧಿಸುತ್ತದೆ.

ಮೊದಲ ಮಳೆ ಬಂದಾಗ ಅಥವಾ ಮುಖ್ಯ ಬೆಳೆ ಕಟಾವಾದ ನಂತರ ಮುಂದಿನ ಬೆಳೆಗೆ ಸಾಕಷ್ಟು ಸಮಯವಿದ್ದಲ್ಲಿ ಮಣ್ಣಿನಲ್ಲಿರುವ ತೇವಾಂಶವನ್ನು ಉಪಯೋಗಿಸಿಕೊಂಡು, ಹಸಿರು ಗೊಬ್ಬರದ ಬೆಳೆಯ ಹೆಚ್ಚು ಬೀಜಗಳನ್ನು ಉಪಯೋಗಿಸಿ ಬಿತ್ತುವುದರಿಂದ ಹೆಚ್ಚು ಹಸಿರೆಲೆ ಇಳುವರಿ ಬರುತ್ತದೆ.

ಹಸಿರು ಗೊಬ್ಬರದ ಗಿಡಗಳ ಬೀಜದ ಅವಶ್ಯಕತೆ ಇದ್ದಾಗ ಮಾತ್ರ ಮುಖ್ಯ ಬೆಳೆ ಬೆಳೆಯುವಾಗ ಜಮೀನಿನ ಬದುಗಳಲ್ಲಿ ಹಸಿರು ಗೊಬ್ಬರದ ಗಿಡಗಳನ್ನು ಬೆಳೆಸಿ ಬೀಜವನ್ನು ಪಡೆಯಬಹುದು. ಹಸಿರು ಗೊಬ್ಬರಗಳಾಗಿ ಡಯಾಂಚ, ಸಸ್ಬೇನಿಯಾ, ಸೆಣಬು, ದ್ವಿದಳ ಧಾನ್ಯಗಳಾದ ಅಲಸಂದೆ, ಹೆಸರು, ಉದ್ದು, ಹುರುಳಿ, ಚವಳಿ ಕಾಯಿಯನ್ನು ಉಪಯೋಗಿಸಬಹುದು. ಹಸಿರಲೆ ಗೊಬ್ಬರದ ಗಿಡಗಳಾಗಿ ಗೊಬ್ಬರದ ಗಿಡ, ಹೊಂಗೆ ಸುಬಾಬುಲ್, ಎಕ್ಕ ಹಾಗೂ ಮರಗಳಾದ ಹಲಸು, ಸಂಪಿಗೆ, ಬೇವು ಮೊದಲಾದ ಮರಗಳ ಸೊಪ್ಪನ್ನು ಕೂಡ ಉಪಯೋಗಿಸಬಹುದು.

ಪ್ರಯೋಜನಗಳು:

1. ಮಣ್ಣಿನಲ್ಲಿರುವ ಸಾವಯವ ಅಂಶ ಹೆಚ್ಚಾಗಿ ಮಣ್ಣಿನ ಫಲವತ್ತತೆ ವೃದ್ಧಿಗೊಳ್ಳುತ್ತದೆ.

2. ಮಣ್ಣಿನ ಕಣಗಳನ್ನು ಸಡಿಲಗೊಳಿಸುವುದರ ಮೂಲಕ ಮಣ್ಣಿನ ಕಣಗಳ ನಡುವಿನ ಜಾಗ ಹೆಚ್ಚಾಗಿ ಗಾಳಿಯಾಡುವಿಕೆ ಹಾಗೂ ನೀರು ಸರಾಗವಾಗಿ ಮಣ್ಣಿನೊಳಗೆ ಇಳಿಯಲು ನೆರವಾಗುತ್ತದೆ.

3. ಪೋಷಕಾಂಶಗಳು ಮಳೆ ನೀರಿನಲ್ಲಿ ಕೊಚ್ಚಿ ಹೋಗುವುದನ್ನು ಮತ್ತು ಮಣ್ಣಿನ ಕೆಳ ಪದರಗಳಲ್ಲಿ ಪೋಷಕಾಂಶಗಳು ಹೊರಹೋಗದಂತೆ ತಡೆಗಟ್ಟುತ್ತವೆ.

4. ಮಣ್ಣಿನಲ್ಲಿ ಗಾಳಿ ಮತ್ತು ನೀರಿನ ಸಮತೋಲನ ಉತ್ತಮಗೊಂಡು ಬೆಳೆಗಳ ಬೆಳವಣಿಗೆಯು ಉತ್ತಮವಾಗಿರುತ್ತದೆ.

5. ಭೂಮಿಯ ಉತ್ಪಾದನೆಯನ್ನು ಹೆಚ್ಚಿಸುತ್ತವೆ.

6. ಸಾವಯವ ಅಂಶವನ್ನೊಳಗೊಂಡ ಮಣ್ಣಿನಲ್ಲಿ ಸೂಕ್ಷ್ಮಾಣು ಜೀವಿಗಳ ಸಂಖ್ಯೆ ಹಾಗೂ ಕ್ರಿಯೆ ಚುರುಕಾಗಿರುತ್ತದೆ.

7. ಜೈವಿಕ ಕ್ರಿಯೆಯ ಚಟುವಟಿಕೆಯನ್ನು ಹೆಚ್ಚಿಸಿ ಪೋಷಕಾಂಶಗಳ ಲಭ್ಯತೆಯನ್ನು ಹೆಚ್ಚಿಸುತ್ತದೆ.

8. ಸುಸ್ಥಿರ ಇಳುವರಿಯನ್ನು ಪಡೆಯಬಹುದು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!