ಚಾಮುಂಡಿ ಬೆಟ್ಟಕ್ಕೆ ರೋಪ್‌ವೇ ನಿರ್ಮಾಣ: ಸಿಡಿದೆದ್ದ ಪರಿಸರ ಪ್ರೇಮಿಗಳು
ಮೈಸೂರು : ಚಾಮುಂಡಿ ಬೆಟ್ಟಕ್ಕೆ ರೋಪ್‌ವೇ ನಿರ್ಮಾಣ ಮಾಡಲು ರಾಜ್ಯ ಸರಕಾರ ತೀರ್ಮಾನಿಸಿದ್ದು, ಈ ಬಾರಿಯ ಬಜೆಟ್‌ನಲ್ಲೂ ಘೋಷಣೆ ಮಾಡಿದೆ. ಆದರೆ, ಸರಕಾರದ ನಿರ್ಧಾರವನ್ನು ಖಂಡಿಸಿ ಇದೀಗ ಮೈಸೂರಿನ ಪರಿಸರ ಪ್ರೇಮಿಗಳು ಸಿಡಿದೆದಿದ್ದಾರೆ. ಮೈಸೂರಿನ ರಾಮಕೃಷ್ಣ ನಗರದಲ್ಲಿ ಚಾಮುಂಡಿ ಬೆಟ್ಟ ಉಳಿಸಿ ಸಮಿತಿಯಿಂದ ರೋಪ್‌ವೇ ನಿರ್ಮಾಣ ನಿರ್ಧಾರದ ವಿರುದ್ಧ ನಡೆದ ಸಭೆಯಲ್ಲಿ ಸಾಹಿತಿಗಳು, ಜನಪ್ರತಿನಿಧಿಗಳು, ಪರಿಸರ ಪ್ರೇಮಿಗಳು ಭಾಗವಹಿಸಿ ಸರಕಾರದ ಕ್ರಮವನ್ನು ಖಂಡಿಸಿದ್ದಾರೆ. ಚಾಮುಂಡಿ ಬೆಟ್ಟದಲ್ಲಿ ರೋಪ್‌ವೇ ಯೋಜನೆ ಕೈಗೊಂಡರೆ ಏನೆಲ್ಲ ಅನಾಹುತಗಳಾಗುತ್ತವೆ ಎಂಬುದನ್ನು ಸರಕಾರಕ್ಕೆ ಮನದಟ್ಟು ಮಾಡಿಕೊಡಲು ಸಮಿತಿ ಮುಂದಾಗಿದೆ. ಅಲ್ಲದೆ, ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ವಿಚಾರ ಸಂಕಿರಣ, ಕರಪತ್ರ, ಸಭೆಗಳನ್ನು ನಡೆಸಲು ನಿರ್ಣಯ ಕೈಗೊಂಡಿದೆ. ಸರಕಾರ ಒಪ್ಪದಿದ್ದರೆ ಹೋರಾಟದ ಮೂಲಕ ಆಂದೋಲನ ನಡೆಸಲು ಸಭೆ ತೀರ್ಮಾನಿಸಿದೆ. ದಿಲ್ಲಿಯಲ್ಲಿ ರೈತರು ನಡೆಸಿದ ಹೋರಾಟದ ರೀತಿಯಲ್ಲಿ ಚಾಮುಂಡಿ ಬೆಟ್ಟದಲ್ಲೂ ಕನ್ನಡ ಸೇರಿದಂತೆ ನಾನಾ ಸಂಘ-ಸಂಸ್ಥೆ ಗಳನ್ನು ಸೇರಿಸಿ ಚಳವಳಿ ನಡೆಸಬೇಕಿದೆ. 15 ದಿನ ಅಲ್ಲ ತಿಂಗಳುಗಳಾಗಲಿ, ಸತತವಾಗಿ ಪ್ರತಿಭಟಿಸಬೇಕಾಗಿದೆ ಎಂದು ಸಾಹಿತಿ ಪ್ರೊ. ಕಾಳೇಗೌಡ ನಾಗವಾರ ಸಲಹೆ ನೀಡಿದರು.
ಮೈಸೂರು ಪಾರಂಪರಿಕ ಪ್ರದೇಶ ಸಂರಕ್ಷಣಾ ಮತ್ತು ಅಭಿವೃದ್ಧಿ ಸಮಿತಿ ಸದಸ್ಯ ಡಾ.ಎನ್.ಎಸ್. ರಂಗರಾಜು ಮಾತನಾಡಿ, ”ಚಾಮುಂಡಿ ಬೆಟ್ಟಕ್ಕೆ ರೋಪ್‌ವೇ, ರೈಲಿಂಗ್ಸ್ ಬೇಡವೇ ಬೇಡ. ಇದಲ್ಲದೆ ಬೆಟ್ಟದ ಮೇಲೆ ಯಾವುದೇ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಬಾರದು. ಈ ಹೋರಾಟ ಪರಿಸರವಾದಿಗಳಿಗಷ್ಟೇ ಅಲ್ಲ ನಾಗರಿಕರು, ಜನ ಪ್ರತಿನಿಧಿಗಳಿಗೂ ಸೇರಿದ್ದು. ಹಾಗಾಗಿ ಎಲ್ಲಾ ರಾಜಕೀಯ ಪಕ್ಷಗಳು ಇದಕ್ಕೆ ಬೆಂಬಲ ನೀಡಬೇಕು. ಚಾಮುಂಡಿಬೆಟ್ಟ ಉಳಿಸಲು ದಿಟ್ಟವಾದ ಹೆಜ್ಜೆಯೊಂದನ್ನು ಇರಿಸಲೇಬೇಕು,” ಎಂದರು. ಮಾಜಿ ಮೇಯರ್ ಬಿ.ಎಲ್. ಭೈರಪ್ಪ ಮಾತನಾಡಿ, ”ಚಾಮುಂಡಿಬೆಟ್ಟ ದೊಡ್ಡದೇನು ಅಲ್ಲ. ಜತೆಗೆ ರಾಮನಗರ ರೀತಿ ಗಟ್ಟಿ ಕಲ್ಲುಗಳೂ ಇಲ್ಲ. ಹಾಗಾಗಿ ರೋಪ್‌ವೇ ಮಾಡಲು ಕೆಳಗಿನಿಂದ 50- 60 ಅಡಿ ಎತ್ತರದಲ್ಲಿ ಕಂಬಿ ಅಳವಡಿಸಬೇಕು. ಅದಕ್ಕಾಗಿ ಸುಮಾರು 15-20 ಅಡಿ ಆಳ ಗುಂಡಿ ತೆಗೆಯಬೇಕು. ಈ ರೀತಿ ಹತ್ತಾರು ಕಡೆ ಮಾಡಿದರೆ ಮೂಲವನ್ನೇ ಹಾಳು ಮಾಡಿದಂತಾಗುತ್ತದೆ,” ಎಂದು ಹೇಳಿದರು.