ಜಗಳೂರಿನಲ್ಲಿ ಆರ್‌ಆರ್‌ಆರ್ ಸಿನಿಮಾ ರದ್ದು! ಯಾಕೆ ಗೊತ್ತಾ?
ದಾವಣಗೆರೆ : ಆರ್.ಆರ್.ಆರ್ ಸಿನಿಮಾ ರಾಜ್ಯಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಆರ್‌ಆರ್‌ಆರ್ ಸಿನಿಮಾ ಇಂದು ಬಿಡುಗಡೆಯಾಗಿದ್ದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಿನಿಮಾದ ಹವಾ ದೊಡ್ಡಮಟ್ಟದಾಗಿದೆ. ಅಭಿಮಾನಿಗಳು ಎಲ್ಲೆಡೆ ದೊಡ್ಡ ದೊಡ್ಡ ಕಟೌಟ್‌ಗಳಿಗೆ ಹಾಲಿನ ಅಭಿಷೇಕ ಮಾಡುವುದು ಸೇರಿದಂತೆ ಥಿಯೇಟರುಗಳ ಮುಂದೆ ಕುಣಿದು ಕುಪ್ಪಳಿಸಿದ್ದಾರೆ. ಆದರೆ ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಭಾರತ ಚಿತ್ರಮಂದಿರದಲ್ಲಿ ಮಾತ್ರ ಅಭಿಮಾನಿಗಳು ರೊಚ್ಚಿಗೆದ್ದು ಪಿಓಪಿ ಶೀಟ್ ಹಾಗೂ ಕೆಲವು ವಸ್ತುಗಳನ್ನು, ಸೌಂಡ್ ಬಾಕ್ಸ್ಗಳನ್ನೆಲ್ಲ ಪುಡಿ ಪುಡಿ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಗಳೂರಿನ ಭಾರತ ಚಿತ್ರಮಂದಿರದಲಿಂದು ಬೆಳಿಗ್ಗೆಯಿಂದ 2 ಶೋ ಸಿನಿಮಾ ಉತ್ತಮವಾಗಿ ಪ್ರದರ್ಶನ ಕಂಡಿದೆ. ಆದರೆ ಮೂರನೇ ಶೋ ಪ್ರದರ್ಶನದ ವೇಳೆ ತಾಂತ್ರಿಕ ಸಮಸ್ಯೆಯಿಂದ ವಿಡಿಯೋ ಕಟ್ ಕಟ್ ಆಗುವುದಲ್ಲದೆ ಸೌಂಡ್ ಎಫೆಕ್ಟ್ ಬಾರದಿರುವುದಕ್ಕೆ ಅಭಿಮಾನಿಗಳು ಕೋಪಗೊಂಡಿದ್ದಾರೆ. ಈ ಕಾರಣಕ್ಕಾಗಿ ಚಿತ್ರಮಂದಿರದ ವಿರುದ್ಧ ಕೋಪಗೊಂಡು ಪಿಓಪಿ ಶೀಟ್ ಹಾಗೂ ಕೆಲವು ವಸ್ತುಗಳನ್ನು ಮುರಿದು ಹಾಕಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಚಿತ್ರಮಂದಿರದವರು ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿ ಇಂದಿನ ರಾತ್ರಿಯ ಶೋ ರದ್ದುಮಾಡಿ ಟಿಕೆಟ್ ದರವನ್ನು ವಾಪಸ್ ನೀಡಿ ಕಳುಹಿಸಿದ್ದಾರೆ. 20 ರಿಂದ 30 ಕಿಲೋಮೀಟರ್‌ಗಳಿಂದ ಗ್ರಾಮೀಣ ಭಾಗದಿಂದ ಬಂದಿದ್ದ ಅಭಿಮಾನಿಗಳು ವಿಪರೀತ ನಿರಾಸೆಯಿಂದ ಮನೆ ಕಡೆ ಮುಖ ಮಾಡಿದ್ದು ಕಂಡುಬ0ದಿತ್ತು.