ಸರ್ಕಾರದ ಯೋಜನೆಗಳ ಮೂಲಕ ವಿದ್ಯಾರ್ಥಿಗಳು ಸ್ವ ಉದ್ಯೋಗ ಮಾಡುವ ಕಡೆಗೆ ಗಮನಹರಿಸಿ – ಸಂಸದ ಜಿ ಎಂ ಸಿದ್ದೇಶ್ವರ
ದಾವಣಗೆರೆ: ಸರ್ಕಾರ ವಿದ್ಯಾರ್ಥಿಗಳಿಗೆ ಅನೇಕ ಯೋಜನೆಗಳ ಮೂಲಕ ಸವಲತ್ತುಗಳನ್ನು ಒದಗಿಸುತ್ತಿದ್ದು, ವಿದ್ಯಾರ್ಥಿಗಳು ಇದನ್ನು ಸದುಪಯೋಗ ಪಡಿಸಿಕೊಂಡು ಸ್ವ ಉದ್ಯೋಗ ಮಾಡುವ ಕಡೆಗೆ ಗಮನಹರಿಸಬೇಕೆಂದು ಸಂಸದ ಜಿ.ಎಂ. ಸಿದ್ದೇಶ್ವರ್ ಹೇಳಿದರು.
ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಹಾಗೂ ದಾವಣಗೆರೆ ಸ್ಮಾರ್ಟ್ ಸಿಟಿ ಲಿಮಿಟೆಡ್ ಇವರ ವತಿಯಿಂದ ಇಲ್ಲಿನ ಐಟಿಐ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಂಪ್ಯೂಟರ್ ಲ್ಯಾಬ್ ಹಾಗೂ ಸ್ಮಾರ್ಟ್ ಕ್ಲಾಸ್‌ಗಳ ಉದ್ಘಾಟನೆ ನೆರವೇರಿಸಿ, ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ವಿದ್ಯಾರ್ಥಿಗಳಿಗೆ ಟೂಲ್ ಕಿಟ್ ವಿತರಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಕೇವಲ ಸರ್ಕಾರಿ ಅಥವಾ ಇತರೆ ಖಾಸಗಿ ಕಂಪನಿಗಳ ಉದ್ಯೋಗಕ್ಕೆ ಆತುಕೊಳ್ಳದೇ ಸ್ವಯಂ ಉದ್ಯೋಗ ಮಾಡಲು ಮುಂದಾಗಬೇಕು. ಸ್ವಾವಲಂಬಿಗಳಾಗಿ ಸ್ವ ಉದ್ಯೋಗ ಪ್ರಾರಂಭಿಸಬೇಕು. ಹಾಗಿದ್ದಾಗ ದೇಶದಲ್ಲಿರುವ ನಿರುದ್ಯೋಗ ಸಮಸ್ಯೆ ಕೂಡ ಬಗೆಹರಿಯಲಿದೆ ಎಂದು ಹೇಳಿದರು.
ಸರ್ಕಾರ ಮೊದಲು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಮಾತ್ರ ವಿದ್ಯಾರ್ಥಿ ವೇತನ ಸೇರಿದಂತೆ ವಿವಿಧ ಸವಲತ್ತುಗಳನ್ನು ನೀಡುತ್ತಿತ್ತು. ಇಂದಿನ ಸಿಎಂ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ವಿಶೇಷವಾಗಿ ರೈತರ ಮಕ್ಕಳಿಗೆ ಮತ್ತು ವಿದ್ಯಾರ್ಥಿನಿಯರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸ್ಕಾಲರ್‌ಶಿಪ್ ನೀಡಲು ಘೋಷಣೆ ಮಾಡಿದ್ದು, ಸದ್ಯದಲ್ಲಿಯೇ ಹಣ ಬಿಡುಗಡೆಯಾಗಲಿದೆ. ವಿದ್ಯಾರ್ಥಿಗಳು ಇಂತಹ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಿ ಎಂದರು.
ಶಾಸಕ ಎಸ್.ಎ. ರವೀಂದ್ರನಾಥ್ ಮಾತನಾಡಿ, ದಾವಣಗೆರೆಯಲ್ಲಿ ಇರುವ ಐಟಿಐ ಕಾಲೇಜಿಗೆ ರಾಜ್ಯದಲ್ಲಿ ಒಳ್ಳೆಯ ಹೆಸರಿದೆ. ಆ ರೀತಿಯ ಉತ್ತಮ ತರಬೇತಿಯನ್ನು ಇಲ್ಲಿನ ಶಿಕ್ಷಕರು ಮಕ್ಕಳಿಗೆ ನೀಡುತ್ತಿದ್ದಾರೆ. ವಿದ್ಯಾರ್ಥಿಗಳು ಅದನ್ನು ಉಪಯೋಗಿಸಿಕೊಂಡು ಸ್ವ-ಉದ್ಯೋಗ ಪ್ರಾರಂಭಿಸಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯ ಎನ್. ಏಕನಾಥ ಅಧ್ಯಕ್ಷತೆ ವಹಿಸಿದ್ದರು. ಮೇಯರ್ ಎಸ್.ಟಿ. ವೀರೇಶ್, ಉಪ ಮೇಯರ್ ಉಮಾ ಪ್ರಕಾಶ್, ಸಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಜಿ. ಮಲ್ಲಾಪುರ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.