50 ಕ್ಷೇತ್ರಗಳಲ್ಲಿ ಸರ್ವೋದಯ ಕರ್ನಾಟಕ ಸ್ಪರ್ಧೆ: ಚಾಮರಸ ಮಾಲಿಪಾಟೀಲ
ಧಾರವಾಡ: ಬರಲಿರುವ ಚುನಾವಣೆಯಲ್ಲಿ 50 ಕ್ಷೇತ್ರಗಳಲ್ಲಿ ಸರ್ವೋದಯ ಕರ್ನಾಟಕ ಪಕ್ಷವು ಸ್ಪರ್ದಿಸಲಿದೆ ಎಂದು ಪಕ್ಷದ ಅಧ್ಯಕ್ಷ ಚಾಮರಸ ಮಾಲಿಪಾಟೀಲ ತಿಳಿಸಿದ್ದಾರೆ.
ರಾಜಕೀಯದಿಂದ ಭ್ರಷ್ಟಾಚಾರವನ್ನು ದೂರ ಮಾಡಬೇಕು ಎನ್ನುವುದು ನಮ್ಮ ಉದ್ದೇಶವಾಗಿದ್ದು, ಈ ಬಾರಿ ಯುವ ಸಮುದಾಯಕ್ಕೆ ಹೆಚ್ಚಿನ ಸ್ಥಾನಗಳನ್ನು ನೀಡಲಾಗುತ್ತಿದೆ ಎಂದವರು ಹೇಳಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರವು ಸಾಕಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಎಲ್ಲ ಕ್ಷೇತ್ರಗಳಲ್ಲೂ ವಿಫಲವಾಗಿದೆ. ರಾಜಕೀಯ ಎಂಬುದು ಹಣ ಗಳಿಕೆಯ ಉದ್ಯೋಗವಲ್ಲ, ಅದು ಸೇವಾ ಕ್ಷೇತ್ರ ಎಂಬುದನ್ನು ಯುವಜನತೆಗೆ ತಿಳಿಸುವ ಕೆಲಸವನ್ನು ಮಾಡಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿರುವ ಎಲ್ಲ ಪಕ್ಷಗಳೂ ಪರಸ್ಪರ ಕಚ್ಚಾಡುತ್ತ ಜನರ ದಾರಿ ತಪ್ಪಿಸುತ್ತಿವೆ. ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಘೋಷಿಸಿರುವ ಭದ್ರಾ ಮೇಲ್ದಂಡೆ ಯೋಜನೆಗೆ 5,300ಕೋಟಿ ರೂ. ನೀಡಿರುವುದು ಚುನಾವಣೆಗೆ ಖರ್ಚು ಮಾಡುವ ಸಲುವಾಗಿಯೇ ಹೊರತು, ರೈತರಿಗಲ್ಲ. ಇಂಥ ಹುಸಿ ಭರವಸೆಗಳಿಗೆ ರೈತರು ಮರುಳಾಗಬಾರದು ಎಂದು ಚಾಮರಸ ಹೇಳಿದ್ದಾರೆ.