ಕಾಂಗ್ರೆಸ್ ಪಕ್ಷದಿಂದ ಸ್ಫರ್ದೆ ಬಗ್ಗೆ ಮಾತುಕತೆಗೆ ಸವದಿ ಬೆಂಗಳೂರಿಗೆ

ಬೆಳಗಾವಿ: ಕಾಂಗ್ರೆಸ್ ನಾಯಕ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಳುಹಿಸಿರುವ ವಿಶೇಷ ವಿಮಾನದಲ್ಲಿ ಶುಕ್ರವಾರ ಲಕ್ಷ್ಮಣ ಸವದಿ ಬೆಂಗಳೂರಿಗೆ ಹಾರಿದ್ದಾರೆ.
ವಿಧಾನ ಪರಿಷತ್ ಸ್ಥಾನ ಹಾಗೂ ಬಿಜೆಪಿ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಲು, ಲಕ್ಷ್ಮಣ ಸವದಿ ಶುಕ್ರವಾರ ಬೆಳಿಗ್ಗೆ ಇಲ್ಲಿನ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ತೆರಳಿದರು.
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಖುದ್ದಾಗಿ ವಿಮಾನ ನಿಲ್ದಾಣಕ್ಕೆ ಬಂದು ಸವದಿ ಅವರನ್ನು ಸ್ವಾಗತಿಸಿ ಬೆಂಗಳೂರಿಗೆ ಬೆಂಗಳೂರಿಗೆ ಕರೆದೊಯ್ದರು.
ಅಥಣಿ ಕ್ಷೇತ್ರದಲ್ಲಿ ಟಿಕೆಟ್ ಕೈತಪ್ಪಿದ್ದರಿಂದ ಬಿಜೆಪಿಯಿಂದ ಹೊರನಡೆಯುವುದಾಗಿ ಅವರು ಎರಡು ದಿನಗಳ ಹಿಂದಷ್ಟೇ ಹೇಳಿದ್ದರು. ಆದರೆ ಯಾವ ಪಕ್ಷ ಸೇರುತ್ತೇನೆ ಎಂದು ಸ್ಪಷ್ಟಪಡಿಸಿರಲಿಲ್ಲ. ಸ್ವತಃ ಡಿ.ಕೆ. ಶಿವಕುಮಾರ ಅವರೇ ವಿಮಾನ ಏರ್ಪಾಡು ಮಾಡಿದ್ದರಿಂದ ಕಾಂಗ್ರೆಸ್ ಸೇರುವುದು ಬಹುತೇಕ ಖಚಿತವಾಗಿದೆ.
ಬೆಂಗಳೂರಿನಲ್ಲಿ ಬಿಜೆಪಿ ಹಾಗೂ ವಿಧಾನ ಪರಿಷತ್ತಿನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಬಳಿಕ, ಸವದಿ ಕೆಪಿಸಿಸಿ ಕಚೇರಿಗೆ ತೆರಳಲಿದ್ದಾರೆ. ಅಲ್ಲಿ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿ ಪಕ್ಷಕ್ಕೆ ಸೇರುವರು. ಸಂಜೆ 5 ಬೆಳಗಾವಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ನೇತೃತ್ವದಲ್ಲಿ ನಡೆಯುವ ಜನಸಂಕಲ್ಪ ಸಮಾವೇಶದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದು ಸವದಿ ಆಪ್ತರು ತಿಳಿಸಿದ್ದಾರೆ.
ಈ ಸಮಾವೇಶದಲ್ಲಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ ಕೂಡ ಪಾಲ್ಗೊಳ್ಳಲಿದ್ದಾತೆ. ಇದೇ ವೇದಿಕೆಯಲ್ಲಿ ಸವದಿ ಕಾಂಗ್ರೆಸ್ ಅಭ್ಯರ್ಥಿ ಆಗಿ ಘೋಷಣೆ ಆಗಲಿದ್ದಾರೆ ಎಂದೂ ತಿಳಿಸಲಾಗಿದೆ.