ವಿದ್ಯಾರ್ಥಿಗಳಲ್ಲಿ ಪ್ರಾಯೋಗಿಕ ಕಲಿಕೆಗೆ ವಿಜ್ಞಾನ ಕೇಂದ್ರ ಸಹಕಾರಿ: ಸಂಸದ ಜಿ.ಎಂ.ಸಿದ್ದೇಶ್ವರ

ಜಿ.ಎಂ.ಸಿದ್ದೇಶ್ವರ
ದಾವಣಗೆರೆ :ಆಧುನಿಕ ದಿನಗಳಲ್ಲಿ ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಕಲಿಯಲು ವಿಜ್ಞಾನ ಕೇಂದ್ರ ಸಹಕಾರಿಯಾಗಿದೆ ಎಂದು ಲೋಕಸಭಾ ಸದಸ್ಯರಾದ ಜಿ.ಎಂ ಸಿದ್ದೇಶ್ವರ ಅವರು ಹೇಳಿದರು.
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ವೈಜ್ಞಾನಿಕ ಪ್ರೋತ್ಸಾಹ ಸೊಸೈಟಿ ವತಿಯಿಂದ ಶನಿವಾರ ಜಿಲ್ಲೆಯ ಆನಗೋಡು ಹೋಬಳಿಯ ಹುಳುಪಿನಕಟ್ಟೆಯಲ್ಲಿ ನಿರ್ಮಾಣವಾಗಿರುವ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಚಟುವಟಿಕೆ ಹಾಗೂ ಸಂಶೋಧನೆ ಕಡೆಗೆ ಉತ್ತೇಜಿಸುವ ಉದ್ದೇಶದಿಂದ ಜಿಲ್ಲೆಯಲ್ಲಿ ವಿಜ್ಞಾನ ಕೇಂದ್ರ ನಿರ್ಮಿಸಲಾಗಿದೆ. ವಿಜ್ಞಾನದ ಆವಿಷ್ಕಾರಗಳನ್ನು ಪ್ರಾಯೋಗಿಕವಾಗಿ ಪರಿಚಯಿಸುವ ನಿಟ್ಟಿನಲ್ಲಿ ಈ ಕೇಂದ್ರ ಅನುಕೂಲವಾಗಿದ್ದು ಮುಂದಿನ ೩ ತಿಂಗಳಲ್ಲಿ ಜಿಲ್ಲೆಯ ಎಲ್ಲಾ ಶಾಲೆಯ ಮಕ್ಕಳೂ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡುವಂತಾಗಬೇಕು ಈ ನಿಟ್ಟಿನಲ್ಲಿ ಎಲ್ಲಾ ಶಿಕ್ಷಕರು ಮುಂದಾಗಬೇಕು.
ವಿಜ್ಞಾನ ಕೇಂದ್ರಕ್ಕೆ ರೂ.೩.೮೬ ಕೋಟಿ ಮಂಜೂರಾಗಿದ್ದು, ಈ ಪೈಕಿ ರೂ.೩. ೧೦ ಕೋಟಿ ನಿರ್ಮಾಣಕ್ಕೆ ಖರ್ಚಾಗಿದೆ. ಉಳಿದ ಹಣದಲ್ಲಿ ಇತರೆ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಡಿ.ಡಿ.ಪಿ.ಐ ಮತ್ತು ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಾಯಕೊಂಡ ಶಾಸಕ ಹಾಗೂ ಡಾ. ಬಾಬು ಜಗಜೀವನ್ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರು ಪ್ರೊ.ಎನ್.ಲಿಂಗಣ್ಣ ಮಾತನಾಡಿ ಇತ್ತೀಚಿನ ದಿನಗಳಲ್ಲಿ ವಿಜ್ಞಾನವು ಅತೀ ವೇಗವಾಗಿ ಬೆಳೆಯುತ್ತಿದ್ದು ನಮ್ಮ ಜಿಲ್ಲೆಯ ಶಾಲಾ ಮಕ್ಕಳು ಪ್ರಾಯೋಗಿಕವಾಗಿ ಕಲಿಯಲು ವಿಜ್ಞಾನ ಕೇಂದ್ರ ನೆರವಾಗಲಿದೆ ಎಂದರು
ನಿರ್ಮಿತಿ ಕೇಂದ್ರದ ವ್ಯಾವಸ್ಥಾಪಕ ನಿರ್ದೇಶಕರಾದ ರವಿ ಎಲ್, ಡಿ.ಡಿ.ಪಿ.ಐ ತಿಪ್ಪೇಶಪ್ಪ, ಡಯಟ್ ಪ್ರಾಂಶುಪಾಲರಾದ ಗೀತಾ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಾದಪ್ಪ ಉಪಸ್ಥಿತರಿದ್ದರು.