ಜಿಲ್ಲಾ ಕುರುಬರ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ: ರಾಮಚಂದ್ರಪ್ಪ
ದಾವಣಗೆರೆ: ಕರ್ನಾಟಕ ಪ್ರದೇಶ ಕುರುಬರ ಸಂಘದ ಅಡಿಯಲ್ಲಿ ಜಿಲ್ಲಾ ಕುರುಬರ ಸಂಘಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಪ್ರದೇಶ ಕುರುಬರ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಕೆ ರಾಮಚಂದ್ರಪ್ಪ ಘೋಷಣೆ ಮಾಡಿದರು.
ಅವರು ನಿನ್ನೆ ಸಂಜೆ ಕುರುಬರ ವಿದ್ಯಾರ್ಥಿ ನಿಲಯದಲ್ಲಿ ಕುರುಬ ಸಮಾಜದ ಜಿಲ್ಲಾ ಮುಖಂಡರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ದಾವಣಗೆರೆ ಜಿಲ್ಲೆಯಲ್ಲಿ ಜಿಲ್ಲಾ ಕುರುಬರ ಸಂಘ ನಿಷ್ಕ್ರಿಯ ವಾಗಿದ್ದು, ಚಟುವಟಿಕೆ ಶೂನ್ಯವಾಗಿದೆ. ಆದ್ದರಿಂದ ಜಿಲ್ಲಾ ಕುರುಬರ ಸಂಘಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿ, ಪುನಶ್ಚೇತನಗೊಳಿಸಲಾಗುವುದು ಎಂದು ಹೇಳಿದರು.
ಪ್ರದೇಶ ಕುರುಬರ ಸಂಘದ ನಿರ್ದೇಶಕ ಹೆಚ್ ಬಿ ಪರಶುರಾಮಪ್ಪನವರು ಮಾತನಾಡಿ ಜಿಲ್ಲೆಯ ತಾಲ್ಲೂಕು ಸಂಘಗಳನ್ನು ಸಂಪರ್ಕಿಸಿ ಜಿಲ್ಲಾ ಸಂಘಕ್ಕೆ ಸೂಕ್ತರಾದರವರನ್ನು ಆಯ್ಕೆ ಮಾಡಿ ಕಳುಹಿಸುವಂತೆ ಪ್ರೇರಪಣೆ ನೀಡಬೇಕು ಎಂದು ಹೇಳಿದರು.
ಕುರುಬ ಸಮಾಜದ ಹಿರಿಯ ಮುಖಂಡ ಬಿ ಎಂ ಸತೀಶ್ ರವರು ಮಾತನಾಡಿ, ಸಮಾಜದ ಸಂಘಟನೆ ನಿಂತ ನೀರಾಗಿದೆ. ಪ್ರಜಾತಂತ್ರದ ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ಅಳವಡಿಸಿಕೊಂಡರೆ ಮಾತ್ರ ಉತ್ತಮ ಸಂಘಟನೆ ಮಾಡಲು ಸಾಧ್ಯ ಎಂದು ಹೇಳಿದರು.
ಮಾಜಿ ದೂಡ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಮಾತನಾಡಿ, ಪ್ರದೇಶ ಕುರುಬರ ಸಂಘದ ಅಡಿಯಲ್ಲಿ ಯುವ ಘಟಕ ಮತ್ತು ಮಹಿಳಾ ಘಟಕಗಳ ಸ್ಥಾಪನೆ ಆಗಬೇಕು. ಸಮಾಜದ ಸಂಘಟನೆ ಮತ್ತು ನಾಯಕತ್ವ ಪಕ್ಷಾತೀತವಾಗಿರಬೇಕು ಎಂದು ಹೇಳಿದರು.
ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಮುದಹದಡಿ ಬಿ ದಿಳ್ಳೇಪ್ಪನವರು ಮಾತನಾಡಿ ಈಗಿರುವ ಜಿಲ್ಲಾ ಕುರುಬರ ಸಂಘ ಹೇಳ ಹೆಸರಿಲ್ಲದಂತೆ ಆಗಿದೆ. ಅದರಲ್ಲಿರುವ ಒಬ್ಬಿಬ್ಬರು ತಮ್ಮ ಸ್ವಾರ್ಥಕ್ಕಾಗಿ ಸಂಘವನ್ನು ಬಳಸಿ ಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಮುಖಂಡ ಇಟ್ಟಿಗುಡಿ ಮಂಜುನಾಥರವರು ಮಾತನಾಡಿ ಕುರುಬ ಸಮಾಜದ ಸಂಘಗಳಿವೆ, ಆದರೆ ಸಂಘಟನೆ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮುಖಂಡ ಎಸ್ ಎಸ್ ಗಿರೀಶ್ ಮಾತನಾಡಿ ಇದುವರೆಗೂ ಜಿಲ್ಲಾ ಮಟ್ಟದಲ್ಲಿ ಸಮಾಜದ ಸಂಘಟನೆಗೆ ಸಂಘ ಇಲ್ಲದಿದ್ದು ನೋವಿನ ಸಂಗತಿ. ಈಗ ಪ್ರದೇಶ ಕುರುಬರ ಸಂಘದ ಮಧ್ಯೆ ಪ್ರವೇಶದಿಂದ ಸಂತೋಷ ಆಗಿದೆ ಎಂದು ಹೇಳಿದರು.
ವಕೀಲ ಲೋಕಿಕೆರೆ ಪ್ರದೀಪ್ ರವರು ಮಾತನಾಡಿ ಜಿಲ್ಲಾ ಕುರುಬರ ಸಂಘ ಏಕ ವ್ಯಕ್ತಿಯ ಸ್ವಾರ್ಥದಿಂದ ಮೂಲೆಗುಂಪಾಗಿದೆ. ಸಂಘದ ಹೆಸರಿನಲ್ಲಿ ಹಳ್ಳಿಗಳಲ್ಲಿ ಹಣ ಸಂಗ್ರಹಿಸಿ, ಲೆಕ್ಕ ಕೊಡದೆ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಆರೋಪಿಸಿದರು.
ಯುವ ಮುಖಂಡ ಬಿ ಲಿಂಗರಾಜು ಮಾತನಾಡಿ ಸಮಾಜದ ಎಲ್ಲರ ವಿಶ್ವಾಸ ಪಡೆಯಬೇಕು. ಬಣ ಅಥವಾ ಗುಂಪುಗಳು ಇರಬಾರದು. ಶ್ರೀ ಬೀರದೇವರ ಜಾಗದ ಉಳಿವಿಗಾಗಿ ಹೋರಾಟ ನಡೆಸಬೇಕು ಎಂದು ಹೇಳಿದರು.
ಸಭೆಯಲ್ಲಿ ಯುವ ಘಟಕದ ರಾಜ್ಯಾಧ್ಯಕ್ಷ ಭಗವಂತರಾಯ್ ಪಾಟೀಲ್, ಮುಖಂಡರಾದ ಹಾಲೇಕಲ್ಲು ಎಸ್ ಟಿ ಅರವಿಂದ್, ಎಸ್ ಎಸ್ ಗಿರೀಶ್, ಕನ್ನವರ ರೇವಣ್ಣ, ಯುವ ಘರ್ಜನೆ ಶ್ರೀನಿವಾಸ್, ಅಡಾಣಿ ಸಿದ್ದಪ್ಪ, ಮಜ್ಜಿಗೆರೆ ಬಸವರಾಜಪ್ಪ, ಬಾಡರವಿ, ಎಸ್ ಆನಂದ, ಆರ್ ಹನುಮಂತಪ್ಪ, ಕೊಗ್ಗನೂರು ಮಂಜುನಾಥ ಮುಂತಾದವರು ಉಪಸ್ಥಿತರಿದ್ದರು.