ಬಸ್ ಮತ್ತು ಸರಕು ಸಾಗಣೆ ವಾಹನಗಳಿಗೆ ಪ್ರತ್ಯೇಕ ಪಥ! ನಿಯಮ ಉಲ್ಲಂಘನೆಗೆ 10 ಸಾವಿರ ದಂಡ
ನವದೆಹಲಿ: ಸಾರಿಗೆ ಇಲಾಖೆ ರಸ್ತೆಗಳಲ್ಲಿ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವ ಮತ್ತು ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ಸಲುವಾಗಿ ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ನಗರದ ಆಯ್ದ 15 ರಸ್ತೆಗಳಲ್ಲಿ ಬಸ್ ಮತ್ತು ಸರಕು ಸಾಗಣೆ ವಾಹನಗಳಿಗೆ ಪ್ರತ್ಯೇಕ ಪಥ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿದೆ. ಅನುವ್ರತ್ ಮಾರ್ಗ ಟಿ-ಪಾಯಿಂಟ್, ಮೆಹ್ರೌಲಿ-ಬಾದರ್‌ಪುರ್ ರಸ್ತೆ, ಆಶ್ರಮ ಚೌಕ್‌ನಿಂದ ಬಾದರ್‌ಪುರ ಬಾರ್ಡರ್, ಜನಕ್‌ಪುರಿಯಿಂದ ಮಧುಬನ್ ಚೌಕ್, ಮೋತಿ ನಗರದಿಂದ ದ್ವಾರಕಾ ಮೋರ್, ಬ್ರಿಟಾನಿಯಾ ಚೌಕ್‌ನಿಂದ ಧೌಲಾ ಕ್ವಾನ್ ಸೇರಿದಂತೆ 15 ಮಾರ್ಗದಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದೆ.
ಪ್ರತ್ಯೇಕ ಪಥ ನಿಯಮವನ್ನು ಉಲ್ಲಂಘನೆ ಮಾಡುವ ಚಾಲಕರಿಗೆ 10 ಸಾವಿರ ರೂ. ತನಕ ದಂಡ ಹಾಗೂ ಆರು ತಿಂಗಳ ಜೈಲು ಶಿಕ್ಷೆ ವಿಧಿಸಲು ಅಧಿಕಾರವಿದೆ. 1988ರ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 192-ಎ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ. ಸಂಚಾರಿ ಪೊಲೀಸರು, ಸಾರಿಗೆ ಇಲಾಖೆಯು ಬಸ್ಸುಗಳು ಮತ್ತು ಸರಕು ಸಾಗಣೆದಾರರು ಮಾತ್ರ ಬಳಸಲು ಮೀಸಲಿಡುವ ಮಾರ್ಗಗಳು ಬೆಳಗ್ಗೆ 8 ರಿಂದ ರಾತ್ರಿ 10ರ ತನಕ ಜಾರಿಯಲ್ಲಿರುತ್ತದೆ ಎಂದು ಸಾರಿಗೆ ಇಲಾಖೆ ಹೇಳಿದೆ. ಉಳಿದ ಸಮಯದಲ್ಲಿ ಈ ಪಥದಲ್ಲಿ ಇತರ ವಾಹನಗಳು ಸಂಚಾರ ನಡೆಸಬಹುದಾಗಿದೆ.
ಬಸ್ ಮತ್ತು ಸರಕು ಸಾಗಣೆ ವಾಹನಗಳು ತಮಗೆ ಮೀಸಲಿಟ್ಟ ಮಾರ್ಗಗಳಲ್ಲಿ ಮಾತ್ರ ಸಂಚಾರ ನಡೆಸಬೇಕು. ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸಂಚಾರಿ ಪೊಲೀಸರು ಸಹ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಸಿಬ್ಬಂದಿಗಳಿಗೆ ಅಗತ್ಯ ತರಬೇತಿ ಸಹ ನೀಡಲಾಗಿದೆ. ಮೊದಲ ಹಂತದಲ್ಲಿ ಈ ನಿಯಮಗಳನ್ನು ನಗರದ ಆಯ್ದ 46 ಕಾರಿಡಾರ್‌ಗಳಲ್ಲಿ 15 ಕಾರಿಡಾರ್‌ಗಳಲ್ಲಿ ಜಾರಿಗೊಳಿಸಲಾಗುತ್ತಿದೆ. ಈ ಕಾರಿಡಾರ್‌ಗಳಲ್ಲಿ ನಿಯಮಗಳು ಹೇಗೆ ಜಾರಿಯಾಗಲಿವೆ? ಎಂಬುದನ್ನು ತಿಳಿದು ಮುಂದಿನ ಹಂತಕ್ಕೆ ಮುಂದುವರೆಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಈ ಕುರಿತು ಟ್ವೀಟ್ ಮಾಡಿದ್ದು, ‘ದೆಹಲಿ ಸರ್ಕಾರವು ರಸ್ತೆಗಳಲ್ಲಿ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿದೆ. ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಬಸ್ ಪಥ ನಿಯಮ ಜಾರಿಗೊಳಿಸಲಾಗುತ್ತಿದೆ” ಎಂದು ಟ್ವೀಟ್ ಮಾಡಿದ್ದಾರೆ.
ರಾಜಧಾನಿ ದೆಹಲಿ ಹಳೆಯ ನಗರವಾಗಿರುವುದರಿಂದ ಹಲವು ಸವಾಲುಗಳಿವೆ. ಅವುಗಳಲ್ಲಿ ಸಂಚಾರ ದಟ್ಟಣೆ ಸಹ ಸೇರಿದೆ. ಮೆಟ್ರೋ ಸೇರಿದಂತೆ ಅನೇಕ ಆಧುನಿಕ ತಂತ್ರಜ್ಞಾನದ ಮೂಲಕ ನಗರದ ಸಂಚಾರ ದಟ್ಟಣೆ ಕಡಿಮೆ ಮಾಡುವ ಪ್ರಯತ್ನ ನಡೆದಿದೆ.