ಸೆ.4 ರಂದು ಬಿಐಇಟಿ ಕಾಲೇಜಲ್ಲಿ ಟೆಕ್ನೋವೇಶನ್-21
ದಾವಣಗೆರೆ: ನಗರದ ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ತಯಾರಿಸಿರುವ ನವೀನ ಹಾಗೂ ಸಾಮಾಜಿಕ ಪ್ರಸ್ತುತಿ ಹೊಂದಿದ ಯೋಜನೆಗಳ ಪ್ರದರ್ಶನ ಟೆಕ್ನೋವೇಶನ್-21 ತಾಂತ್ರಿಕ ಯೋಜನೆಗಳ ಪ್ರದರ್ಶನವನ್ನು ಸೆ.4 ರ ಇಂದು ಬೆಳಿಗ್ಗೆ 10.30 ಕ್ಕೆ ಕಾಲೇಜು ಆವರಣದ ಎಸ್.ಎಸ್.ಮಲ್ಲಿಕಾರ್ಜುನ ಸಾಂಸ್ಕೃತಿಕ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ.
ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯ ಯೋಜನಾ ನಿರ್ದೇಶಕ ಡಾ.ಭಾಗ್ಯವಾನ ಮುದಿಗೌಡ್ರ ಮತ್ತು ಯುಬಿಡಿಟಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಮಲ್ಲಿಕಾರ್ಜುನ ಎಸ್.ಹೊಳಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಪ್ರಸ್ತುತ ವರ್ಷ ವಿದ್ಯಾರ್ಥಿಗಳು ಸಲ್ಲಿಸಿದ್ದ ಯೋಜನಾ ಪ್ರಸ್ತಾವನೆಗಳಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯು 24 ಪ್ರಸ್ತಾವನೆಗಳನ್ನು ಅತ್ಯುತ್ತಮವೆಂದು ಪರಿಗಣಿಸಿ ಹಣಕಾಸಿನ ನೆರವು ನೀಡಿದೆ. ಅದೇ ರೀತಿ ಕರ್ನಾಟಕ ಸರ್ಕಾರದ ನ್ಯೂ ಏಜ್ ಇನ್‌ಕ್ಯುಬೇಷನ್ ನೆಟ್‌ವರ್ಕ್ 10 ಯೋಜನೆಗಳಿಗೂ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ 20 ಯೋಜನೆಗಳಿಗೂ ಅತ್ಯುತ್ತಮ ಯೋಜನೆಗಳೆಂದು ಗುರುತಿಸಿ ಹಣಕಾಸಿನ ನೆರವನ್ನು ನೀಡಿವೆ.
ಇದರ ಜೊತೆಯಲ್ಲಿ ಉತ್ತಮವಾದ 15 ಯೋಜನೆಗಳಿಗೆ ಬಿ.ಐ.ಇ.ಟಿ. ವತಿಯಿಂದ ಹಣಕಾಸಿನ ನೆರವನ್ನು ನೀಡಲಾಗಿದೆ. ಒಟ್ಟು ಸುಮಾರು 30 ಲಕ್ಷ ಹಣಕಾಸಿನ ನೆರವು ಈ ವರ್ಷ ವಿದ್ಯಾರ್ಥಿಗಳಿಗೆ ದೊರೆತಿದೆ . ವಿದ್ಯಾರ್ಥಿಗಳ ಈ ಸಾಧನೆಯ ಉಪಯುಕ್ತತೆಯನ್ನು ಸಾರ್ವಜನಿಕರಿಗೆ ತಿಳಿಸಲು ಮತ್ತು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಸೆ.4 ರ ಇಂದು ಬೆಳಿಗ್ಗೆ 10.30 ಕ್ಕೆ ಬಿ.ಐ.ಇ.ಟಿ ಆವರಣದ ಎಸ್.ಎಸ್ ಮಲ್ಲಿಕಾರ್ಜುನ ಸಾಂಸ್ಕೃತಿಕ ಕೇಂದ್ರದಲ್ಲಿ ಈ ಎಲ್ಲಾ ಯೋಜನೆಗಳ ಬೃಹತ್ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಈ ಪ್ರದರ್ಶನದಲ್ಲಿ ಅತ್ಯುತ್ತಮವಾದ 60 ಯೋಜನೆಗಳು ಪ್ರದರ್ಶಿತಗೊಳ್ಳಲಿವೆ ಎಂದು ಕಾಲೇಜು ಪ್ರಾಂಶುಪಾಲ ಡಾ.ಎ.ಬಿ.ಅರವಿಂದ ಮತ್ತು ಆಡಳಿತ ಮಂಡಳಿ ನಿರ್ದೇಶಕ ಪ್ರೊ.ವೈ.ವೃಷಬೇಂದ್ರಪ್ಪ ತಿಳಿಸಿದ್ದಾರೆ.