ಕಾಲುವೆಯೊಳಗೆ ಕೊಳಚೆ ನೀರು; ವಿಪಕ್ಷ ನಾಯಕ ಗಡಿಗುಡಾಳ್ ಮಂಜುನಾಥ್ ಪರಿಶೀಲನೆ
ದಾವಣಗೆರೆ: ನಗರದ ನಿಜಲಿಂಗಪ್ಪ ಬಡಾವಣೆಯ ೧ ನೇ ಮುಖ್ಯರಸ್ತೆಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಆದ ಮಳೆನೀರಿನ ಕಾಲುವೆಯೊಳಗೆ ಕೊಚ್ಚೆ ನೀರು ಹರಿಯುತ್ತಿರುವುದು ಗಮನಕ್ಕೆ ಬಂದ ಕಾರಣ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಗಡಿಗುಡಾಳ್ ಮಂಜುನಾಥ್ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಸಂಬಂಧಪಟ್ಟ ಇಲಾಖೆಯ ಎಂಜಿನಿಯರ್ ಕರೆಯಿಸಿ ಕೂಡಲೇ ಸರಿಪಡಿಸುವಂತೆ ಸೂಚನೆ ನೀಡಲಾಯಿತು.
ಕಾಲುವೆಯೊಳಗೆ ತ್ಯಾಜ್ಯದ ನೀರು ಹರಿದು ಬರುತ್ತಿದ್ದರೂ ಕ್ರಮಕೈಗೊಂಡಿಲ್ಲ. ಸದ್ಯದಲ್ಲಿಯೇ ಕಾಂಕ್ರೀಟ್ ಬ್ಲಾಕುಗಳನ್ನು ಹಾಕಿ ಮುಚ್ಚುವ ಕಾಲುವೆ ಇದಾಗಿದ್ದು, ಇದರೊಳಗೆ ಹರಿಯುವ ನೀರು ಕಲುಷಿತವಾಗಿದೆ. ಮಾತ್ರವಲ್ಲ, ಇದು ಭೂಮಿಯೊಳಗೆ ಸೇರಿ ಅಂತರ್ಜಲ ವಿಷಯುಕ್ತವಾಗುವ ಸಾಧ್ಯತೆ ಇದೆ. ಆದ ಕಾರಣಕ್ಕೆ ಮುಂಜಾಗ್ರತಾ ಕ್ರಮವಾಗಿ ಗಡಿಗುಡಾಳ್ ಮಂಜುನಾಥ್, ಪಾಲಿಕೆ ಸದಸ್ಯರಾದ ಎ. ನಾಗರಾಜ್, ಆಶಾ ಉಮೇಶ್ ಅವರು ಆಗಮಿಸಿ ಕಾಮಗಾರಿ ವೀಕ್ಷಿಸಿದರು.
ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ ಆಂದೋಲನ ಕಾರ್ಯಗತಗೊಳಿಸಬೇಕಾದ ಈ ವಾರ್ಡ್ ನ ಬಿಜೆಪಿ ಕಾರ್ಪೊರೇಟರ್ ರ ಗಮನಕ್ಕೆ ಗಡಿಗುಡಾಳ್ ಮಂಜುನಾಥ್ ತಂದರು. ಇದೇ ರಸ್ತೆಯಲ್ಲಿಯೇ ಜಿಲ್ಲಾ ಕಾಂಗ್ರೆಸ್ ಪಕ್ಷದ ಕಚೇರಿ ಬರುತ್ತದೆ. ಪ್ರತಿಷ್ಠಿತ ಬಡಾವಣೆಯೂ ಹೌದು. ಸ್ಮಾರ್ಟ್ ಸಿಟಿ ಅಡಿಯಲ್ಲಿ ಬರುವ ಒಂದು ರಸ್ತೆಯ ಮಳೆಗಾಲುವೆ ಗುಣಮಟ್ಟವಾಗಿ ನಡೆದಿಲ್ಲ. ಕಲುಷಿತ ನೀರು ಹರಿಯದಂತೆ ಮುನ್ನೆಚ್ಚರಿಕೆ ವಹಿಸುವಂತೆ ಹಾಗೂ ಈಗ ಆಗಿರುವ ಸಮಸ್ಯೆಯನ್ನು ಕೂಡಲೇ ಪರಿಹರಿಸಬೇಕು ಎಂದು ಗಡಿಗುಡಾಳ್ ಸೂಚಿಸಿದರು.
ಪಾಲಿಕೆ ಎಂಜಿನಿಯರ್‌ಗಳಾದ ನವೀನ್ ಹಾಗೂ ವಿನಯ್ ಅವರಿಗೆ ಈ ಸಂಬಂಧ ಮಾಹಿತಿ ನೀಡಿದ ಮಂಜುನಾಥ್ ಅವರು, ಇಷ್ಟು ಸಮಸ್ಯೆಯಿದ್ದರೂ ನಿರ್ಲಕ್ಷ್ಯವೇಕೆ? ಕೂಡಲೇ ಆಗಿರುವ ಲೋಪ ಸರಿಪಡಿಸಿ. ಜನರಿಂದ ಮತ್ತೆ ದೂರುಗಳು ಬಾರದಂತೆ ಕೆಲಸ ಮಾಡಬೇಕು ಎಂದು ಹೇಳಿದರು.