ಬೆಂಗಳೂರು : ರಾಜ್ಯ ಸರ್ಕಾರಿ ನೌಕರರಿಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಶೇ.17ರಷ್ಟು ವೇತನ ಹೆಚ್ಚಳಕ್ಕೆ ಒಪ್ಪಿಗೆ ನೀಡಿ ಅಧಿಕೃತ ಆದೇಶ ಹೊರ ಹಾಕಿದ ಬೆನ್ನಲ್ಲೇ ನೌಕರರು ತಮ್ಮ ಅನಿರ್ಧಿಷ್ಟಾವಧಿ ಮುಷ್ಕರವನ್ನು ಹಿಂದಕ್ಕೆ ಪಡೆದಿದ್ದಾರೆ.
ಶೇ.17ರಷ್ಟು ವೇತನ ಹೆಚ್ಚಳ ಆದೇಶ ಎಪ್ರಿಲ್ 1, 2023 ರಿಂದ ಜಾರಿ ಆಗಲಿದೆ ಎಂದು ಸರಕಾರ ಘೋಷಿಸಿದೆ. ಈ ನಿರ್ಧಾರದಿಂದ ನಮದೆ ಸಂತೃಪ್ತಿ ಇಲ್ಲ ಸಮಾಧಾನ ಇದೆ ಎಂದು ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಹೇಳಿದಾರೆ.
ನಮಗೆ ಸರ್ಕಾರದ ಈ ನಿರ್ಧಾರ ಸಮಾಧಾನ ತಂದಿಲ್ಲ. 25% ಹೆಚ್ಚಳಕ್ಕೆ ಬೇಡಿಕೆ ಇಟ್ಟಿದ್ದೆವು. 17 % ನೀಡಿದ್ದಾರೆ. ಸರ್ಕಾರ ಮೊದಲ ಹಂತದಲ್ಲಿ ಈ ತೀರ್ಮಾನ ಮಾಡಿದೆ. ನಮದೆ ಸಂತೃಪ್ತಿ ಇಲ್ಲ ಸಮಾಧಾನ ಇದೆ. ಹಾಗಾಗಿ ಸರ್ಕಾರದ ಈ ತೀರ್ಮಾನವನ್ನ ಒಪ್ಪಿಕೊಂಡಿದ್ದೇವೆ.
ನಮಗೆ ಎರಡೂ ಆದೇಶಗಳನ್ನ ಸರ್ಕಾರ ಮಾಡಿದೆ. ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಸರ್ಕಾರದ ನಿರ್ಧಾರ ಸ್ವಾಗತಿಸುತ್ತೇವೆ. ನಾವು ಸಕಾರಾತ್ಮಕವಾಗಿ ಒಪ್ಪಿರುವುದರಿಂದ ರಾಜ್ಯದ ಎಲ್ಲಾ ಸರ್ಕಾರಿ ನೌಕರರು ಮುಷ್ಕರವನ್ನ ವಾಪಸ್ ಪಡೆಯುತ್ತೇವೆ ಎಂದಿದ್ದಾರೆ.
ಸರ್ಕಾರ ನಮ್ಮ ಬೇಡಿಕೆ ಬಗ್ಗೆ ನಿನ್ನೆ ಬೆಳಗಿನಿಂದ ಚರ್ಚೆ ಮಾಡಿತ್ತು. ನಾವು ಸರ್ಕಾರ ಆಡಳಿತ ವ್ಯವಸ್ಥೆಯ ಒಂದು ಭಾಗ. ಇದನ್ನ ಸರ್ಕಾರ ನಮ್ಮ ಬೇಡಿಕೆಗೆ ಪೂರಕವಾಗೇ ಪರಿಗಣಿಸಿದೆ. 7 ನೇ ವೇತನ ಆಯೋಗ ಮಧ್ಯಂತರ ವರದಿಗೆ 30 ದಿನ ಕಾಲಾವಕಾಶ ಕೇಳಿತ್ತು. ಒಂದು ವಾರದಲ್ಲಿ ರಿಪೋರ್ಟ್ ಕೊಡಲು ವೇತನ ಆಯೋಗ ನಿರಾಕರಿಸಿತು. ಈ ಹಿಂದೆ ಮಧ್ಯಂತರ ಪರಿಹಾರ ಕೊಟ್ಟಿತ್ತು. ಅದರಂತೆ ಈ ಬಾರಿಯೂ ಪರಿಹಾರ ಭತ್ಯೆ ನೀಡಲು ಒಪ್ಪಿದೆ. ತಾತ್ಕಾಲಿಕ ಭತ್ಯೆ ನೀಡಲು ಸರ್ಕಾರ ನಿರ್ಧಾರ ಮಾಡಿದೆ. ಎನ್‌ಪಿಎಸ್ ಅನ್ನು ಒಪಿಎಸ್ ಮಾಡ್ಬೇಕು ಅನ್ನೋದು ನಮ್ಮ ಡಿಮ್ಯಾಂಡ್.
ಬಿಜೆಪಿ ಸರ್ಕಾರ ಯಾವುದೇ ರಾಜ್ಯದಲ್ಲಿ ಎನ್ಪಿಎಸ್ ಓಪಿಎಸ್ ಮಾಡಿಲ್ಲ. ಆದ್ರೆ ಈ ಬಗ್ಗೆ ಸಿಎಂ ನಮ್ಮ ಸಂಘಟನೆ ಒತ್ತಾಯಕ್ಕೆ ಮಣಿದು ಬೇರೆ ರಾಜ್ಯದ ಅಧ್ಯಯನಕ್ಕೆ ಮುಂದಾಗಿದ್ದಾರೆ. ರಾಜ್ಯದಲ್ಲಿ ಜಾರಿಯಿರುವ ರಾಷ್ಟ್ರೀಯ ಪಿಂಚಣಿ ಯೋಜನೆಯ ಬದಲಾಗಿ ಓಪಿಎಸ್ ಜಾರಿ ಮಾಡಿರುವ ರಾಜ್ಯಗಳಿಗೆ ಭೇಟಿ ನೀಡಿ ವರದಿ ಕೊಡೋದಕ್ಕೆ ಅಪರ ಮುಖ್ಯ ಕಾರ್ಯದರ್ಶಿ ಅವರಿಗೆ ಸೂಚನೆ ನೀಡಿದೆ. ಎರಡು ತಿಂಗಳು ಕಾಲ ಸಮಯವಾಕಾಶ ಸರ್ಕಾರ ಕೇಳಿದೆ.
15 ದಿನದ ಒಳಗಾಗಿ ಸರ್ಕಾರಿ ನೌಕರ ಕುಟುಂಬಕ್ಕೆ ಉಚಿತ ಆರೋಗ್ಯ ಯೋಜನೆ ಕೊಡೋದಾಗಿ ಹೇಳಿದ್ದಾರೆ. 17% ಫಿಟ್ ಮೆಂಟ್ ಸೌಲಭ್ಯಕ್ಕೆ ಸರ್ಕಾರಿ ನೌಕರ ಸಂಘ ಒಪ್ಪಿಗೆ ಸೂಚಿಸಿದೆ. ಮೊದಲ ಹಂತವಾಗಿ ಈ ನಿರ್ಧಾರ ಸರ್ಕಾರ ತೆಗೆದುಕೊಂಡಿದೆ. 40% ಅನ್ನು ಕೊಡೊ ಭರವಸೆ ಸರ್ಕಾರ ನೀಡಿದೆ. ಅದು ಏಳನೇ ವೇತನ ಆಯೋಗದಲ್ಲಿ ಬರಬೇಕು. ಅದನ್ನ ಪೂರೈಕೆ ಮಾಡಲೇಬೇಕು. ಇಲ್ಲದಿದ್ದರೆ ಮತ್ತೆ ಎರಡ್ಮೂರು ತಿಂಗಳ ಬಳಿಕ ಹೋರಾಟ ಮುಂದುವರೆಸ್ತೇವೆ ಎಂದು ಷಡಕ್ಷರಿ ಹೇಳಿಕೆ ನೀಡಿದ್ದಾರೆ.
