ಶಾಲೆಗಳು ಆರಂಭ ಹಿನ್ನೆಲೆ: ಮಕ್ಕಳಿಗೆ, ಶಿಕ್ಷಕರಿಗೆ ಸಚಿವರಿಗೆ ಧೈರ್ಯ ತುಂಬುವಂತೆ ಜಿಲ್ಲಾ ಸಚಿವರಿಗೆ ಸಿಎಂ ಸೂಚನೆ

ದಾವಣಗೆರೆ: ಕರೋನಾ ಮಹಾಮಾರಿಯ ನಡುಬೆಯೂ ಮಕ್ಕಳ ಶೈಕ್ಷಣಿಕ ಭವಿಷ್ಯದ ಉದ್ದೇಶದಿಂದ ರಾಜ್ಯ ಸರ್ಕಾರ ಆ.23ರ ಸೋಮವಾರದಿಂದ ಶಾಲೆಗಳನ್ನು ಆರಂಭಿಸಲು ನಿರ್ಧರಿಸಿದ್ದು, ಯಾವುದೇ ಆತಂಕವಿಲ್ಲದೇ ಮಕ್ಕಳನ್ನು ಧೈರ್ಯವಾಗಿ ಶಾಲೆಗಳಿಗೆ ಕಳುಹಿಸಿ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಮನವಿ ಮಾಡಿದ್ದಾರೆ.
ಸೋಮವಾರದಿಂದ ಸರ್ಕಾರಿ, ಅನುದಾನ, ಅನುದಾನ ರಹಿತ ಶಾಲೆಗಳಿಗೆ 9 ಮತ್ತು 10 ನೇ ತರಗತಿಗಳ ಪ್ರಾರಂಭಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಆದ್ದರಿಂದ ಆಯಾ ಜಿಲ್ಲೆಗಳ ಉಸ್ತುವಾರಿ ಹೊತ್ತಿರುವ ಸಚಿವರುಗಳು ಶಾಲೆಗೆ ಭೇಟಿ ನೀಡಿ ಮಕ್ಕಳು, ಶಿಕ್ಷಕರನ್ನು ಪ್ರೋತ್ಸಾಹಿಸಿ ಪೋಷಕರಿಗೆ ಧೈರ್ಯ ತುಂಬುವ ಕೆಲಸ ಮಾಡುವಂತೆ ಸಿಎಂ ಬಸವರಾಜ್ ಬೊಮ್ಮಾಯಿ ಸಚಿವರುಗಳಿಗೆ ನಿರ್ದೇಶಿಸಿದ್ದಾರೆ.
ಸಿಎಂ ಬೊಮ್ಮಾಯಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಕ್ಕಳ ಭವಿಷ್ಯದ ದೃಷ್ಟಿಯಿಂದ ತಜ್ಞರ ಸಲಹೆಗೆ ಅನುಗುಣವಾಗಿ ಶಾಲೆಗಳನ್ನು ಪ್ರಾರಂಭಿಸಲು ನಿರ್ಧರಿಸಲಾಗಿದ್ದು, ಪೋಷಕರು ಯಾವುದೇ ಆತಂಕವಿಲ್ಲದೇ ಕೋವಿಡ್ ಮಾರ್ಗಸೂಚಿ ಪಾಲಿಸಿ ಮಕ್ಕಳನ್ನು ಶಾಲೆಗೆ ಕಳುಹಿಸಿ ಸರ್ಕಾರದೊಂದಿಗೆ ಸಹಕರಿಸಿ ಎಂದು ಅವರು ಕೋರಿದ್ದಾರೆ.
ಪೋಷಕರ ಅನುಮತಿ ಪತ್ರದೊಂದಿಗೆ ಮಕ್ಕಳು ಶಾಲೆಗೆ ಹಾಜರಾಗಬೇಕು. ಮಕ್ಕಳು ಶಾಲೆಗೆ ಬರುವುದು ಕಡ್ಡಾಯವಿಲ್ಲ. ಆನ್‌ಲೈನ್,ಆಫ್ಲೈನ್ ಎರಡರಲ್ಲೂ ಪಾಠ ಮಾಡಲು ಶಿಕ್ಷಣ ಇಲಾಖೆ ತಯಾರಿ ನಡೆಸಿದೆ.